ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿ ಹಫ್ತಾ ದಂಧೆ ಆರೋಪ: ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ 'ಪೆರುಂಬಾಡಿ ಚಲೋ'
admincoorgdaily

ವಿರಾಜಪೇಟೆ: ಪೆರುಂಬಾಡಿ ತಪಾಸಣಾ ಗೇಟ್‌ನಲ್ಲಿ ಅಕ್ರಮ ಹಣ ವಸೂಲಿ, ಹಫ್ತಾ ದಂಧೆ, ಗೂಂಡಾಗಿರಿ ಹಾಗೂ ನೈತಿಕ ಪೊಲೀಸ್‌ಗಿರಿ ನಡೆಯುತ್ತಿದೆ ಎಂದು ಆರೋಪಿಸಿ, ಬಿಜೆಪಿ ವಿರಾಜಪೇಟೆ ಮಂಡಲದಿಂದ 'ಪೆರುಂಬಾಡಿ ಚಲೋ' ಹಾಗೂ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ-ಕೇರಳ ಸಂಪರ್ಕಿಸುವ ವಿರಾಜಪೇಟೆ-ಮಾಕುಟ್ಟ ಅಂತರರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ತಡೆಯಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತು ಸಾರ್ವಜನಿಕರು ಪರದಾಡಿದರು. ತುರ್ತು ಸೇವಾ ವಾಹನಗಳನ್ನು ಮಾನವೀಯತೆ ಆಧಾರದಲ್ಲಿ ಬಿಡಲಾಯಿತು.
*ಸಿಬಿಐ ತನಿಖೆಗೆ ಆಗ್ರಹ:* ಬಿಜೆಪಿ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಮಾತನಾಡಿ, ರಾತ್ರಿ ವೇಳೆ ಕೇರಳಕ್ಕೆ ತೆರಳುವ ಸರಕು ವಾಹನಗಳನ್ನು ತಡೆದು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಹಚರರು ಹಾಗೂ ಇಬ್ಬರು ಸಿವಿಲ್ ಉಡುಪಿನ ವ್ಯಕ್ತಿಗಳು ವಿರಾಜಪೇಟೆ ನಗರ ಠಾಣೆಯ ಎಸ್‌ಐ ಸಮ್ಮುಖದಲ್ಲೇ ಹಣ ವಸೂಲಿ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ದಾಷ್ಟಿಕದಿಂದ ಗೂಂಡಾಗಿರಿ ನಡೆಸಲಾಗುತ್ತಿದೆ. ದಿನಕ್ಕೆ 6 ಲಕ್ಷಕ್ಕೂ ಹೆಚ್ಚು, ವರ್ಷಕ್ಕೆ ಕೋಟ್ಯಾಂತರ ರೂ. ಅಕ್ರಮ ವ್ಯವಹಾರ ನಡೆಯುತ್ತಿದೆ. ಸರ್ಕಾರದ ಕೃಪಾಕಟಾಕ್ಷದಿಂದ ನಡೆಯುತ್ತಿರುವ ದಂಧೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
*ದಿನಕ್ಕೆ ಲಕ್ಷಾಂತರ ವಸೂಲಿ:* ಆರೋಪಿಗಳು ತಾವೇ ಸಂದರ್ಶನದಲ್ಲಿ ಹೇಳಿಕೊಂಡಂತೆ ಚೆತ್ತು ಕಲ್ಲು ಲಾರಿಗೆ 3,500 ರೂ., ಹುಲ್ಲು ಲಾರಿಗೆ 500 ರೂ., ಇತರ ವಾಹನಗಳಿಗೆ 50 ರಿಂದ 200 ರೂ. ವಸೂಲಿ ಮಾಡಲಾಗುತ್ತಿದೆ. ಈ ಹಣ ಎಲ್ಲಿಗೆ ಹೋಯಿತು? ಮಂಗಳೂರು/ಸೂರತ್ಕಲ್‌ನಲ್ಲಿ ದೂರು ಇಲ್ಲದಿದ್ದರೂ ಪೊಲೀಸರೇ ಸೋಮೋಟೋ ಕೇಸ್ ಹಾಕಿದರೆ, ಕೊಡಗಿನಲ್ಲಿ ಯಾಕೆ ಆಗಿಲ್ಲ? ಕೊಡಗಿಗೆ ಬೇರೆ ಕಾನೂನಿದೆಯೇ? ಗೋ ಸಾಗಾಟ ತಡೆದವರ ಮೇಲೆ ರೌಡಿಶೀಟ್ ಹಾಕುವ ಪೊಲೀಸರು, ವಿಡಿಯೋ ಸಾಕ್ಷಿ ಇದ್ದರೂ ಇವರ ಮೇಲೆ ಯಾಕೆ ಆಕ್ಷನ್ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
*ಪೊಲೀಸರ ಸಸ್ಪೆಂಡ್ ರದ್ದುಪಡಿಸಿ:* "ನಿಮಗೆ ಯೂನಿಫಾರ್ಮ್‌ಗೆ ಭದ್ರತೆ ಇಲ್ಲ ಎಂದರೆ ಸಾಮಾನ್ಯರಿಗೆ ಏನು ಮಾಡುತ್ತೀರಿ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮೂರು ಅಮಾಯಕ ಪೊಲೀಸರನ್ನು ಯಾಕೆ ಸಸ್ಪೆಂಡ್ ಮಾಡಿದ್ದೀರಿ? ಅವರ ಸಸ್ಪೆನ್ಶನ್ ರದ್ದುಪಡಿಸಿ" ಎಂದು ಶಾಂತೆಯಂಡ ರವಿ ಕುಶಾಲಪ್ಪ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, "ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಎಸ್‌ಐ ಮುಂದೆ ನಿಂತು ಗಾಡಿಗಳನ್ನು ತಡೆದು ಹಣ ವಸೂಲಿ ಮಾಡಿ ಮೇಜಿನ ಮೇಲೆ ಬಿಸಾಡುತ್ತಾರೆ. ಸಂವಿಧಾನದಲ್ಲಿ ಕರೆನ್ಸಿಯನ್ನು ಹೀಗೆ ಬಿಸಾಡಲು ಅವಕಾಶವಿದೆಯೇ? ಖಾಸಗಿ ವ್ಯಕ್ತಿಗೆ ಎಸ್‌ಐ ಮುಂದೆ ಕಲೆಕ್ಷನ್ ಮಾಡಲು ಯಾರ ಮಾರ್ಗದರ್ಶನ ಇದೆ? ಇದು ಉತ್ತರ ಪ್ರದೇಶ, ಬಿಹಾರದ ದಾದಾಗಿರಿ ಈಗ ಕೊಡಗಿಗೆ ಬಂದಿದೆ" ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, "ಕೇರಳದಲ್ಲಿ 30 ರೂ. ಇರುವ ಚೆತ್ತು ಕಲ್ಲು ಟ್ರಾನ್ಸ್‌ಪೋರ್ಟೇಶನ್ ಸೇರಿ 50 ರೂ. ಆಗುತ್ತದೆ. ಆದರೆ ಕೊಡಗಿನಲ್ಲಿ 62 ರೂ.ಗೆ ಮಾರಾಟವಾಗುತ್ತದೆ. ಈ 12 ರೂ. ವ್ಯತ್ಯಾಸ ಪೊಲೀಸ್, ಆರ್‌ಟಿಒ ಹಾಗೂ ಮೈನ್ಸ್ ಇಲಾಖೆಗೆ ಹೋಗುತ್ತದೆ ಎಂದು ಆರೋಪಿಯೇ ಹೇಳಿದ್ದಾನೆ. ನೂರಾರು ಲಾರಿಗಳು ಪರ್ಮಿಟ್ ಇಲ್ಲದೆ ಓಡಾಡುತ್ತಿವೆ, ಪಿಡಬ್ಲ್ಯೂಡಿ ರಸ್ತೆ ಹಾಳಾಗುತ್ತಿದೆ. ಸಾಮಾನ್ಯ ಜನ 5 ಸೆಂಟ್ ಮನೆ ಕನ್ವರ್ಷನ್‌ಗೆ ಅಲೆದಾಡಿಸಿದರೆ, ಅಕ್ರಮ ಲಾರಿಗಳ ಮೇಲೆ ಎಷ್ಟು ಕೇಸ್ ಹಾಕಿದ್ದೀರಿ?" ಎಂದು ಗಣಿ ಇಲಾಖೆ ಅಧಿಕಾರಿಗಳಾದ ವಿದ್ಯಾ ಮತ್ತು ಸುಭಾಶ್ ಚಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಆಗಮಿಸಿದ ಎಸ್ಪಿ ಬಿಂದುಮಣಿ ಅವರು, "ವಿಡಿಯೋ ನೋಡಿ ಡಿವೈಎಸ್ಪಿ ವರದಿ ಆಧಾರದ ಮೇಲೆ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ನೈತಿಕ ಪೊಲೀಸ್‌ಗಿರಿ ಹಾಗೂ ಅಕ್ರಮ ವಸೂಲಿ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ಆರ್‌ಟಿಒ ಅಧಿಕಾರಿ ಪ್ರದೀಪ್ ಮಾತನಾಡಿ, ಕೋಸ್ಟಲ್/ಅಂತರರಾಜ್ಯ ರೀಜನ್‌ನಲ್ಲಿ ಕ್ಲಿಯರೆನ್ಸ್ ಅವಕಾಶವಿದೆ, ಪರ್ಮಿಟ್ ಇಲ್ಲದಿದ್ದರೆ ಆಕ್ಷನ್ ತೆಗೆದುಕೊಳ್ಳಲಾಗುವುದು ಎಂದರು.
ಮನವಿ ಪತ್ರ ಸ್ವೀಕರಿಸಿದ ಎಸ್ಪಿ ಅವರಿಗೆ ಹಫ್ತಾ ವಸೂಲಿಗಾರರನ್ನು ಕೂಡಲೇ ಬಂಧಿಸಿ ಪ್ರಕರಣ ದಾಖಲಿಸಬೇಕು, ಅಮಾನತಾದ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಬಿಜೆಪಿ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ಮಾಚಿಮಂಡ ರವೀಂದ್ರ, ಯಮುನಾ ಚಂಗಪ್ಪ, ಪಟ್ಟಡ ರೀನಾ ಪ್ರಕಾಶ್, ಕುಟ್ಟಂಡ ಅಜಿತ್ ಕರುಂಬಯ್ಯ, ಅಚ್ಚಪಂಡ ಮಹೇಶ್ ಗಣಪತಿ ಮತ್ತಿತರರು ಇದ್ದರು. ಡಿವೈಎಸ್ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.