ಸೌದಿಯಲ್ಲಿ ಸಿಲುಕಿರುವ ಕೊಡಗಿನ ಉಮ್ರಾ ಯಾತ್ರಿಕರ ರಕ್ಷಣೆಗೆ ಮನವಿ
admincoorgdaily

ಸೋಮವಾರಪೇಟೆ: ಪವಿತ್ರ ಮೆಕ್ಕಾ-ಮದೀನಾಕ್ಕೆ ಉಮ್ರಾ ಯಾತ್ರೆ ಕೈಗೊಂಡಿರುವ ಕೊಡಗು ಜಿಲ್ಲೆಯ ಕೆಲವು ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಂತೆ ಕಾಂಗ್ರೆಸ್ ಮುಖಂಡ ಅಶ್ರಫ್ ಎಂ.ಇ., ಸೋಮವಾರಪೇಟೆ ಅವರು ಕೊಡಗಿನ ಇಬ್ಬರು ಶಾಸಕರಿಗೆ ಮನವಿ ಮಾಡಿದ್ದಾರೆ.
ಯಾತ್ರಿಕರು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಆತಂಕದಲ್ಲಿದ್ದು, ತಮ್ಮ ಮನೆಯವರು ಸುರಕ್ಷಿತವಾಗಿ ಮರಳಿ ಬರಲಿ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಿ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಇದು ಯಾವುದೇ ಧರ್ಮ ಅಥವಾ ರಾಜಕೀಯಕ್ಕೆ ಸೀಮಿತವಾದ ವಿಷಯವಲ್ಲ, ಇದು ನಮ್ಮ ಜಿಲ್ಲೆಯ ಜನರ ಸುರಕ್ಷತೆ ಮತ್ತು ಕುಟುಂಬಗಳ ನೆಮ್ಮದಿಯ ಪ್ರಶ್ನೆಯಾಗಿದ್ದು, ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ಅಶ್ರಫ್ ಅವರು ವಿನಂತಿಸಿದ್ದಾರೆ.