ಸುರಕ್ಷಿತ ಮತ್ತು ಹಸಿರು ದೀಪಾವಳಿ ಆಚರಿಸಲು ಮನವಿ
admincoorgdaily

ಮಡಿಕೇರಿ: ನ.8 ರಿಂದ 10 ರ ವರೆಗೆ ನಡೆಯಲಿರುವ
ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸ್ವಚ್ಛ ಪರಿಸರವನ್ನು ಕಾಪಾಡಲು ಮತ್ತು ಹಬ್ಬವನ್ನು ಮಾಲಿನ್ಯಮುಕ್ತವಾಗಿ
ಸುರಕ್ಷಿತವಾಗಿ ಆಚರಿಸಲು ಹಸಿರು ದೀಪಾವಳಿ (Green Diwali) ಆಚರಣೆಗೆ ಕೊಡಗು ಜಿಲ್ಲಾ ಪರಿಸರ ಜಾಗೃತಿ ಸಮಿತಿಯ ವತಿಯಿಂದ ನಾಗರಿಕರಲ್ಲಿ ಮನವಿ ಮಾಡಲಾಗಿದೆ.
ವಿಷಪೂರಿತ ಹೊಗೆ ಸೂಸುವ ಮಾಲಿನ್ಯಕಾರಿ ಪಟಾಕಿಗಳ ಬದಲಿಗೆ ನಾವು
ಸರ್ಕಾರದ ನಿಯಮಗಳಿಗೆ ಅನುಗುಣವಾಗಿರುವ ಕೇವಲ ಹಸಿರು ಪಟಾಕಿಗಳನ್ನು (Green Crackers) ಮಾತ್ರ ಬಳಸುವ ಮೂಲಕ ಮಾಲಿನ್ಯಮುಕ್ತ ದೀಪಾವಳಿ ಆಚರಿಸುವ ಕುರಿತು ಪರಿಸರ ಜಾಗೃತಿ ಆಂದೋಲನದ
ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವತಿಯಿಂದ
ದೇಶಾದಾದ್ಯಂತ ಅಕ್ಟೋಬರ್ 20 ರಿಂದ ನವೆಂಬರ್ 8, 2026 ರವರೆಗೆ ಹಸಿರು ದೀಪಾವಳಿ ಅಭಿಯಾನ 2026
ಆಚರಿಸಲಾಗುತ್ತಿದೆ. ಅದರಂತೆ ರಾಜ್ಯದಲ್ಲೂ ಕೂಡ ಜಿಲ್ಲಾಡಳಿತಗಳ ಮೂಲಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹಸಿರು ದೀಪಾವಳಿ ಆಚರಣೆ ಬಗ್ಗೆ ಜನಜಾಗೃತಿಗೆ ಕ್ರಮವಹಿಸಲಾಗಿದೆ.
ನಾಗರಿಕರು ಪಟಾಕಿ ಖರೀದಿಸುವಾಗ ಅಧಿಕೃತ ಪರವಾನಗಿ ಪಡೆದ
ಅಂಗಡಿಗಳಿಂದಲೇ ಮತ್ತು ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಸಿರು ಪಟಾಕಿ ಹೌದೇ ಎಂದು ಖಚಿತಪಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಮಾಲಿನ್ಯಕಾರಿ ಪಟಾಕಿ ತ್ಯಜಿಸಿ
ಸಾಂಪ್ರದಾಯಿಕ ಮಣ್ಣಿನ ಹಣತೆ( ದೀಪ) ಗಳನ್ನು ಬಳಸಿ ಮನೆಯನ್ನು ಬೆಳಗಿಸಿ
ಪಟಾಕಿಗಳನ್ನು ಸಿಡಿಸಲು ನಿಗದಿಪಡಿಸಿದ ರಾತ್ರಿ 8 ರಿಂದ 10 ಗಂಟೆಯವರೆಗೆ
ಸಮಯವನ್ನು ಕಡ್ಡಾಯವಾಗಿ ಪಾಲಿಸಲು ನಾಗರಿಕರಲ್ಲಿ ಮನವಿ ಮಾಡಲಾಗಿದೆ.
ಬೆಳಕಿನ ಹಬ್ಬವನ್ನು ಪರಿಸರ ಸ್ನೇಹಿ, ಸುರಕ್ಷಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಆಚರಿಸಬೇಕೆಂದು ಮನವಿ ಮಾಡಿದ್ದಾರೆ.
ಹಸಿರು ದೀಪಾವಳಿ ಆಚರಣೆ ಹಾಗೂ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಜಾಗೃತಿ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಶಾಲಾ- ಕಾಲೇಜು , ಶಿಕ್ಷಣ ಸಂಸ್ಥೆಗಳಲ್ಲಿ ಮನವಿ ಮಾಡಲಾಗಿದೆ ಎಂದು ಪರಿಸರ ಪ್ರೇಮಿಯೂ ಆದ ಪ್ರೇಮಕುಮಾರ್ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯ ವಿಜ್ಞಾನ ಪರಿಷತ್ತು, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ಎನ್.ಎಸ್.ಎಸ್.ಸಂಘಟನೆಗಳ ಮೂಲಕ ಕಳೆದ 16 ವರ್ಷಗಳಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಶಾಲಾ- ಕಾಲೇಜುಗಳಲ್ಲಿ ಮತ್ತು ಸಮುದಾಯದಲ್ಲಿ ಜನಜಾಗೃತಿ ಮೂಡಿಸುತ್ತಾ ಬರುತ್ತಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ಪಟಾಕಿ ಸಿಡಿತ ಕ್ಷೀಣಿಸಿದೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಅತಿಯಾದ ಮತ್ತು ವಿಷಾನಿಲ ಹೊರಸೂಸುವ ಮಾಲಿನ್ಯಕಾರಿ
ಪಟಾಕಿಗಳ ಬಳಕೆಯು ಮಕ್ಕಳು, ಹಿರಿಯ ನಾಗರಿಕರು, ಉಸಿರಾಟದ ಸೂಕ್ಷ್ಮತೆ ಹೊಂದಿರುವ ವ್ಯಕ್ತಿಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾಲಿನ್ಯಕಾರಿ ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ, ಶಬ್ದ ಮತ್ತು ವಾಯು ಮಾಲಿನ್ಯವನ್ನು ತಪ್ಪಿಸುವ ಮೂಲಕ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸುಬೇಕಿದೆ. ಸ್ವಚ್ಛ, ಆರೋಗ್ಯಕರ ಮತ್ತು ಹಸಿರು ಭಾರತಕ್ಕೆ ಕೊಡುಗೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ನಿಯಮದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದು ಮತ್ತು ನಾಗರಿಕರು ಇವುಗಳನ್ನು ಮಾತ್ರ ಬಳಕೆ ಮಾಡಲು ಮನವಿ ಮಾಡಲಾಗಿದೆ.