ಬ್ಯಾಂಕ್‌ಗೆ ಹೋಗುವ ಪ್ಲಾನ್ ಇದೆಯಾ? ಈ ಸುದ್ದಿ ಓದಿ ಆಮೇಲೆ ಹೊರಡಿ
admincoorgdaily

ನವದೆಹಲಿ: ಈ ಮಾಸಾಂತ್ಯದಲ್ಲಿ ಅಂದರೆ, ಮುಂದಿನ ವಾರ ಏನಾದರೂ ಬ್ಯಾಂಕ್ ವಹಿವಾಟು ನಡೆಸಬೇಕು ಎಂದು ಯೋಜಿಸಿದ್ದರೆ, ಅದನ್ನು ಮುಂಚಿತವಾಗಿ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಕಾರಣ ಸೆಪ್ಟಂಬರ್ ಕೊನೆಯ ವಾರದಲ್ಲಿ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ನಡೆಯುವ ಸಾಧ್ಯತೆ ಇದೆ. ಬ್ಯಾಂಕಿಂಗ್ ವಲಯದ ಬೇಡಿಕೆ ಕುರಿತು ಮಾತುಕತೆಗಳು ಸಾಗುತ್ತಿದ್ದು, ಇದಕ್ಕೆ ಯಾವುದೇ ಪರಿಹಾರ ಸಿಗದ ಹಿನ್ನೆಲೆ ಈ ಸಂದರ್ಭದಲ್ಲಿ ಶಾಖೆಗಳಲ್ಲಿ ಸೇವೆಗಳ ವ್ಯತ್ಯಯವಾಗಲಿದೆ. ಇದರಿಂದ ಈಗಾಗಲೇ ಬ್ಯಾಂಕ್ ಪ್ರಕ್ರಿಯೆಗಳನ್ನು ಮುಗಿಸುವಂತೆ ಗ್ರಾಹಕರಿಗೆ ಹಲವು ಬ್ಯಾಂಕ್‌ಗಳು ತಿಳಿಸಿವೆ.
ವಾರಕ್ಕೆ ಐದು ದಿನಗಳ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮತ್ತು ಅದರ ಅಂಗ ಸಂಘಟನೆಗಳು ತಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ಮುಷ್ಕರ ನಡೆಸಲು ನಿರ್ಧರಿಸಿವೆ.
ಮುಷ್ಕರ ಆರಂಭವಾಗುವ ಮುನ್ನವೇ ಪ್ರಮುಖ ವಹಿವಾಟುಗಳನ್ನು ಪೂರ್ಣಗೊಳಿಸುವಂತೆ ಬ್ಯಾಂಕ್‌ಗಳು ಈಗ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ದಿನನಿತ್ಯದ ವಹಿವಾಟುಗಳಿಗಾಗಿ ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಹಾಗೂ ಎಟಿಎಂಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವಂತೆ ಸಲಹೆ ನೀಡಿವೆ.