ಸಮಸ್ತ ಆ್ಯಪ್ ಕಿರಿಕಿರಿ ವಿರುದ್ಧ ಆಶಾ ಕಾರ್ಯಕರ್ತೆಯರ ಆಕ್ರೋಶ: ಮಡಿಕೇರಿಯಲ್ಲಿ ಪ್ರತಿಭಟನೆ
admincoorgdaily

ಮಡಿಕೇರಿ: ಸಮಸ್ತ ಆ್ಯಪ್‌ನಲ್ಲಿನ ತಾಂತ್ರಿಕ ಸಮಸ್ಯೆ, ಮೂಲಸೌಕರ್ಯ ಕೊರತೆ ಮತ್ತು ಬಾಕಿ ಗೌರವಧನ ಪಾವತಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಮಡಿಕೇರಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಸಂಘದ ರಾಜ್ಯ ಉಪಾಧ್ಯಕ್ಷರಾದ ಉಮಾದೇವಿ ಮಾತನಾಡಿ, ಸರ್ಕಾರ ಸಮಸ್ತ ಆ್ಯಪ್ ಮೂಲಕ ಕಾರ್ಯನಿರ್ವಹಣೆಯನ್ನು ಕಡ್ಡಾಯಗೊಳಿಸಿದ್ದು, ಆದರೆ ಉಚಿತ ಆ್ಯಂಡ್ರಾಯ್ಡ್ ಮೊಬೈಲ್ ನೀಡಿಲ್ಲ. ಸ್ವಂತ ಮೊಬೈಲ್ ಬಳಕೆಗೆ ನೀಡುತ್ತಿದ್ದ ಮಾಸಿಕ ರೂ.280 ಬಾಡಿಗೆಯನ್ನೂ ನಿಲ್ಲಿಸಲಾಗಿದೆ ಎಂದು ದೂರಿದರು.
ಸ್ವಂತ ಫೋನಿನಲ್ಲಿ ಇಲಾಖೆಯ ಆ್ಯಪ್ ಹಾಕುವುದರಿಂದ ಮೆಮೊರಿ ಭರ್ತಿಯಾಗಿ ವೈಯಕ್ತಿಕ ಗೌಪ್ಯತೆಗೆ ಧಕ್ಕೆಯಾಗುತ್ತಿದೆ. ಮಧ್ಯವಯಸ್ಕ ಆಶೆಯರಿಗೆ ತಾಂತ್ರಿಕ ತರಬೇತಿ ನೀಡಿಲ್ಲ. ಹೆಚ್ಚುವರಿ ದಾಖಲಾತಿ ಕೆಲಸದಿಂದ ಕ್ಷೇತ್ರ ಕಾರ್ಯಕ್ಕೆ ಹೊರೆಯಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ಒಂದು ವರ್ಷದಿಂದ ಪ್ರೋತ್ಸಾಹಧನ, ಗೌರವಧನ ಸಕಾಲದಲ್ಲಿ ಬಂದಿಲ್ಲ. ಕಳೆದ 9 ವರ್ಷದಲ್ಲಿ ಕೇವಲ 1500 ರೂ. ಹೆಚ್ಚಳವಾಗಿದೆ. ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ 15 ಸಾವಿರಕ್ಕೂ ಹೆಚ್ಚು ಗೌರವಧನ ನೀಡಲಾಗುತ್ತಿದೆ. ಸಮಸ್ಯೆ ಬಗೆಹರಿಯುವವರೆಗೆ ಸಮಸ್ತ ಆ್ಯಪ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು: ರೂ.15000 ಮಾಸಿಕ ಗೌರವಧನ, ಉತ್ತಮ ಗುಣಮಟ್ಟದ ಮೊಬೈಲ್, ಬಾಕಿ ಪ್ರೋತ್ಸಾಹಧನ ಬಿಡುಗಡೆ, ಆರ್‌ಸಿಎಚ್ ಪೋರ್ಟಲ್ ಸಮಸ್ಯೆ ಪರಿಹಾರ, ನಿವೃತ್ತ ಆಶಾಗಳಿಗೆ ಇಡಿಗಂಟು ಪಾವತಿ, ಜಿಪಿಎಸ್ ಒತ್ತಡ ನಿಲ್ಲಿಸುವುದು, ಪ್ರತಿ ತಿಂಗಳು ಸ್ಕೀಮ್ ಕಾಪಿ ನೀಡುವುದು, ಪಾಸ್‌ಬುಕ್‌ನಲ್ಲಿ ತಿಂಗಳ ವಿವರ ನಮೂದಿಸುವುದು ಸೇರಿದಂತೆ 12 ಬೇಡಿಕೆಗಳನ್ನು ಮಂಡಿಸಿದರು.
ಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.