Kodagu

ಮತದಾರರ ಹೆಸರು ಡಿಲೀಟ್‌ಗೆ ಯತ್ನ: ಬ್ಯಾಡಗೊಟ್ಟದಲ್ಲಿ ವಿವಾದ, ತನಿಖೆಗೆ ಆಗ್ರಹ

admincoorgdaily

ಮತದಾರರ ಹೆಸರು ಡಿಲೀಟ್‌ಗೆ ಯತ್ನ: ಬ್ಯಾಡಗೊಟ್ಟದಲ್ಲಿ ವಿವಾದ, ತನಿಖೆಗೆ ಆಗ್ರಹ
ಕೊಡ್ಲಿಪೇಟೆ:ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 64 ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು Form-7 ಅರ್ಜಿಗಳ ಮೂಲಕ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ  ಚರ್ಚೆಗೆ ಕಾರಣವಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಸಲ್ಲಿಕೆಯಾಗಿರುವ Form-7 ಅರ್ಜಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ, ಯಾವ ಕಾರಣಗಳನ್ನು ನಮೂದಿಸಲಾಗಿದೆ ಹಾಗೂ ಸಂಬಂಧಪಟ್ಟ ಮತದಾರರ ಹೆಸರುಗಳನ್ನು ಅಳಿಸಲು ಕಾನೂನುಬದ್ಧ ಕಾರಣಗಳಿವೆಯೇ ಎಂಬುದನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗದ Form-7 ಮಾರ್ಗಸೂಚಿ ಪ್ರಕಾರ, ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ಅಳಿಸಲು ಮರಣ, ಶಾಶ್ವತವಾಗಿ ಸ್ಥಳಾಂತರ, ಈಗಾಗಲೇ ಬೇರೆಡೆ ನೋಂದಣಿ ಸೇರಿದಂತೆ ನಿರ್ದಿಷ್ಟ ಕಾರಣಗಳನ್ನು ನಮೂದಿಸಬೇಕು. ಆ ಕಾರಣವನ್ನು ಸಮರ್ಥಿಸುವ ಹೊಣೆ ಅರ್ಜಿ ಸಲ್ಲಿಸುವವರ ಮೇಲಿದೆ.

ಈ ಹಿನ್ನೆಲೆಯಲ್ಲಿ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ ಎಲ್ಲ Form-7 ಅರ್ಜಿಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಅರ್ಜಿಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಅಥವಾ ಬೆಂಬಲಿಗರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸ್ಥಳೀಯ ಮುಖಂಡರಾದ ಎ.ಸಿ. ನಾಗರಾಜ್, ಬಸವರಾಜ್, ಲೋಕೇಶ್ ಎಂಬುವವರು ಸೆ. 23ರಂದು ರಾತ್ರಿ ಅರ್ಜಿಗಳನ್ನು ತಂದು ಕೊಟ್ಟಿರುವುದಾಗಿ ಮತಗಟ್ಟೆ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಲೋಕೇಶ್ ಮತ್ತು ಅವರ ಪತ್ನಿ ಮಾಧ್ಯಮವೊಂದರಲ್ಲಿ ಮಾತನಾಡಿರುವುದು ಸುದ್ದಿಯಾಗಿದೆ.

ಆದ್ದರಿಂದ ಆರೋಪದ ಸತ್ಯಾಸತ್ಯತೆ ಬಗ್ಗೆ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಶುಕ್ರವಾರ ಬೆಳಿಗ್ಗೆ ಸಂತ್ರಸ್ತರೆಂದು ಹೇಳಲಾದ ಮತದಾರರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕೊಡ್ಲಿಪೇಟೆ ಕಂದಾಯ ಇಲಾಖೆ ಕಚೇರಿ ಮುಂದೆ ಸೇರಿದ್ದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಪ್ರಕರಣದ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕೊಡ್ಲಿಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ದನ್, ತಾಲೂಕು ಕೆಡಿಪಿ ಸಮಿತಿ ಸದಸ್ಯ ವೇದಕುಮಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾವನ, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ಮುಖಂಡರಾದ ಜಕರೀಯಾ ಹಾಗೂ ಅಬ್ದುಲ್ ಖಾದರ್ ಮಾತನಾಡಿದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಿಸಾರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನೀಫ್, ಮುಖಂಡರಾದ ಗಗನ್ ರೈ, ಹಮೀದ್, ದೊಡ್ಡಯ್ಯ, ಬಿ.ಎಂ. ಅಬ್ದುಲ್ ಲತೀಫ್, ಅಬ್ದುಲ್ ರಹಮಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. Form-7 ಅರ್ಜಿಗಳ ಕುರಿತು ಚುನಾವಣಾ ಇಲಾಖೆ ಪಾರದರ್ಶಕವಾಗಿ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾದರೆ ಸಂತ್ರಸ್ತರೊಂದಿಗೆ ಸೇರಿ ಕಂದಾಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.