ಚೆಯ್ಯಂಡಾಣೆಯ ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿ ಮುಚ್ಚಿದ ಆಟೋಚಾಲಕರು
admincoorgdaily

ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಮುಖ್ಯ ಪಟ್ಟಣದ ಹೃದಯಭಾಗದಲ್ಲಿ ನಾಪೋಕ್ಲು–ವಿರಾಜಪೇಟೆ ಸಂಪರ್ಕ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಯನ್ನು ಮುಚ್ಚುವ ಮೂಲಕ ಸ್ಥಳೀಯ ಆಟೋ ಚಾಲಕ ಸಜನ್ ನಂಜುಂಡ ಹಾಗೂ ಅವರ ತಂಡ ಮಾನವೀಯತೆ ಮೆರೆದಿದ್ದಾರೆ.
ಚೆಯ್ಯಂಡಾಣೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದ ವೇಳೆ ತೊಂದರೆ ಅನುಭವಿಸುವಂತಾಗಿತ್ತು. ಪ್ರಮುಖ ಸಂಪರ್ಕ ರಸ್ತೆಯಾಗಿರುವುದರಿಂದ ಈ ಗುಂಡಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪಘಾತದ ಭೀತಿಯನ್ನೂ ಸೃಷ್ಟಿಸಿತ್ತು.
ರಸ್ತೆಯ ಗುಂಡಿಯನ್ನು ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಸ್ಥಳೀಯರೇ ಮುಂದಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಆಟೋ ಚಾಲಕ ಸಜನ್ ನಂಜುಂಡ ಅವರೊಂದಿಗೆ ವೇಣು ಹಾಗೂ ಬಾಲಕೃಷ್ಣ ಕೈಜೋಡಿಸಿ ರಸ್ತೆ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸರ್ಕಾರಿ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಕಾಯದೆ,ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಾದ ಈ ತಂಡದ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜನರ ಸಮಸ್ಯೆಗೆ ಸ್ಪಂದಿಸುವ ಮನೋಭಾವವೇ ನಿಜವಾದ ಮಾನವೀಯತೆ ಎಂಬುದನ್ನು ಸಜನ್ ನಂಜುಂಡ ಹಾಗೂ ಅವರ ತಂಡದ ಕಾರ್ಯ ಸಾಬೀತುಪಡಿಸಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣದ ರಸ್ತೆಗಳಲ್ಲಿರುವ ಗುಂಡಿಗಳನ್ನು ಗುರುತಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.