ಮಡಿಕೇರಿಯಲ್ಲಿ ಹೃದಯ ದಿನದ ಪ್ರಯುಕ್ತ ಜಾಗೃತಿ ಅಭಿಯಾನ
admincoorgdaily

ಮಡಿಕೇರಿ:-ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಸರ್ವೇಕ್ಷಣ ಘಟಕ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ‘ವಿಶ್ವ ಹೃದಯ ದಿನ’ ನಡೆಯಿತು.
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಸನತ್ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದೆ. ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವ ಜೀವನ ಶೈಲಿಯನ್ನು ಉತ್ತೇಜಿಸುವುದು ಮತ್ತು ಹೃದಯಾಘಾತ ಹಾಗೂ ಪಾಶ್ರ್ವವಾಯು ವಿನಂತಹ ಸಮಸ್ಯೆಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ನಮ್ಮ ಬದುಕಿಗೆ ಪ್ರತಿ ಕ್ಷಣ ದುಡಿಯುವ ಹೃದಯ ಕಾಪಾಡುವುದು ಎಲ್ಲರ ಜವಬ್ದಾರಿ ಆಗಿರುತ್ತದೆ. ಹೃದಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯತನದಿಂದ ಮತ್ತು ಉತ್ತಮ ಜೀವನ ಶೈಲಿ ಅನುಸರಿಸದೆ ಇಂದು ಅನೇಕ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ವಿಷಾದನಿಯವೆಂದರು.
ಆರೋಗ್ಯಕರ ಆಹಾರ–ನಿಯಮಿತ ವ್ಯಾಯಾಮ–ತಂಬಾಕಿಗೆ ದೂರ–ಒತ್ತಡ ನಿಯಂತ್ರಣ–ನಿಯಮಿತ ಆರೋಗ್ಯ ತಪಾಸಣೆ” ಇವುಗಳನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳುವುದು ಮುಖ್ಯ ಎಂದರು.
ಮಡಿಕೇರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುನೀಲ್ ಮಾತನಾಡಿ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಇರಲಿ ಹೃದಯರೋಗಗಳ ಅಪಾಯ, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ನೀಡುವುದು ಒಳ್ಳೆಯದು.
ಹೆಚ್ಚು ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಆಹಾರ ಕಡಿಮೆ ಮಾಡಿ, ತರಕಾರಿ, ಹಣ್ಣು, ಧಾನ್ಯಗಳು ಮತ್ತು ಸಮತೋಲಿತ ಆಹಾರ ಸೇವಿಸುವಂತೆ ಪ್ರೇರೇಪಿಸಿ ಆರೋಗ್ಯ ಶಿಕ್ಷಣ ನೀಡಿದರು.
ನಿಯಮಿತ ದೈಹಿಕ ಚಟುವಟಿಕೆ ಹೃದಯದ ಆರೋಗ್ಯಕ್ಕೆ ಸಹಕಾರಿ. ವಯಸ್ಕರಿಗೆ ನಿಯಮಿತ ದೈಹಿಕ ಚಟುವಟಿಕೆಗೆ ಶಿಫಾರಸು ಮಾಡಬೇಕಾಗುತ್ತದೆ. ಧೂಮಪಾನ ಹಾಗೂ ತಂಬಾಕು ಸೇವನೆ ಹೃದಯರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅವುಗಳನ್ನು ತ್ಯಜಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದರು.
ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ: ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಯಂತೆ ಇವುಗಳನ್ನು ನಿಯಂತ್ರಣದಲ್ಲಿ ಇಡುವುದು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ ಎಂದರು.
ಹೃದಯಾಘಾತದ ಲಕ್ಷಣಗಳ ಅರಿವು: ಎದೆನೋವು ಅಥವಾ ಒತ್ತಡ, ಉಸಿರಾಟದ ತೊಂದರೆ, ತಣ್ಣನೆಯ ಬೆವರು, ವಾಕರಿಕೆ, ತಲೆಸುತ್ತುವಿಕೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಇಲಾಖೆಯ ಸಿಬ್ಬಂದಿಯವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅದ್ಯಕ್ಷರಾದ ಅರುಣ್ ಕುಮಾರ್, ಡಾ.ವಿಜಯ್ ಕುಮಾರ್ ಮೂರ್ನಾಡು, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೆ.ಆರ್.ಪ್ರಕಾಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್, ಸುಮತಿ, ನಿಲಿಮ್, ಶಾಲಿನಿ, ಕಿಶೋರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ರವರು ಸ್ವಾಗತಿಸಿದರು. ಜಾಗೃತಿ ಜಾಥಾ: ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಕರಪತ್ರ ವಿತರಿಸಲಾಯಿತು.