Kodagu

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಜಾಗೃತಿ ಜಾಥಾ

admincoorgdaily

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಮಡಿಕೇರಿಯಲ್ಲಿ ಜಾಗೃತಿ ಜಾಥಾ
ಮಡಿಕೇರಿ: ದೇಶದ ಆಂತರಿಕ ಸುರಕ್ಷತೆಗೆ ಗಂಭೀರ ಅಪಾಯ ತಂದೊಡ್ಡುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ೧೨ ದಿನಗಳಿಂದ ನಡೆಯುತ್ತಿರುವ ಜನಜಾಗೃತಿ ವಾಹನ ಜಾಥಾದ ಸಮಾರೋಪ ಕಾರ್ಯಕ್ರಮದ ಜಾಗೃತಿ ಜಾಥಾ ನಗರದಲ್ಲಿ ನಡೆಯಿತು.

ಮಡಿಕೇರಿಯ ಗಾಂಧಿ ಮೈದಾನದಿಂದ ಆರಂಭಗೊಂಡ ಜಾಗೃತಿ ಜಾಥಾ ಮಂಗೇರಿರ ಮುತ್ತಣ್ಣ ವೃತ್ತ, ನಗರದ ಪೊಲೀಸ್ ಠಾಣೆ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕಾಗಿ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತ್ತು. 

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೆಹಲಿಯ ಪ್ರಸಾರ ಭಾರತಿ ಕನ್ಸಲ್ಟೆಂಟ್ ಭರತ್ ಭೂಷಣ್ ಮಾತನಾಡಿ, ಇಂದು ಹಲವು ರಾಷ್ಟ್ರಗಳಲ್ಲಿ ಜನಸಂಖ್ಯೆ ವ್ಯತ್ಯಾಸ, ಕೋಮು ಘರ್ಷಣೆ, ರಾಷ್ಟ್ರದ ಒಡಕು ಮತ್ತು ಪ್ರಜಾಪ್ರಭುತ್ವದ ಬಿಕ್ಕಟ್ಟುಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಭೂತಕಾಲವನ್ನು ಅರಿತು ಜನರಲ್ಲಿ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.ಅನ್ಯಧರ್ಮೀಯ ಮದುವೆಗಳ ಕಾಯ್ದೆ ಮತ್ತು ಹೆಣ್ಮಕ್ಕಳ ಭದ್ರತೆಯ ಕುರಿತು ಮಾತನಾಡಿ, ಶಾಸನದಲ್ಲಿರುವ ನ್ಯೂನತೆಗಳನ್ನು ಅವಲೋಕಿಸಿ ಸೂಕ್ತ ತಿದ್ದುಪಡಿ ಜಾರಿಗೆ ತರುವಂತೆ ಆಗ್ರಹಿಸಿದರು.

ಕೊಡಗು ಸುರಕ್ಷಾ ಆಂದೋಲನ ಸಮಿತಿ ಸಂಯೋಜಕ ಕುಕ್ಕೇರ ಅಜಿತ್ ಮಾತನಾಡಿ, ದೇಶದೊಳಗೆ ಅಕ್ರಮವಾಗಿ ನುಸುಳಿರುವ ಎರಡು ಕೋಟಿಯಷ್ಟು ಅಕ್ರಮ ಬಾಂಗ್ಲಾ ವಲಸಿಗರು ಈಗಾಗಲೇ ಅಕ್ರಮವಾಗಿ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ಪಾನ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆ, ಅಕ್ರಮ ಆಸ್ತಿಪಾಸ್ತಿ ಇತ್ಯಾದಿ ಇತ್ಯಾದಿಗಳೆಲ್ಲವುಗಳ ಮುಟ್ಟುಗೋಲಿಗೆ ಸರಕಾರವು ವಿಶೇಷ ಕಾರ್ಯಪಡೆ ರಚಿಸಬೇಕು. ಭಾರತೀಯರು ಕಟ್ಟುವ  ತೆರಿಗೆ ಹಣದಿಂದ ಆರಂಭಿಸಿರುವ  ಯೋಜನೆಗಳ ಲಾಭವನ್ನು ಅಕ್ರಮ ಬಾಂಗ್ಲಾ ವಲಸಿಗರು ದೋಚಲು ಅವಕಾಶ ನೀಡಬಾರದು. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರನ್ನು ಕೂಡಲೇ ಈ ದೇಶದಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಸಾಮಾಜಿಕ ಕಾರ್ಯಕರ್ತ ಎಚ್.ಎಂ.ಚಂದ್ರಶೇಖರ್, ಕೊಡಗು ಸುರಕ್ಷಾ ಆಂದೋಲನ ಸಮಿತಿರಾದ ರಾಬಿನ್ ದೇವಯ್ಯ, ಚಂದ್ರ ಉಡೋತ್ತು ಇತ್ತರರಿದ್ದರು.