ಅಜ್ಜಿಕುಟ್ಟೀರ ಕೊಡವ ಕೌಟುಂಬಿಕ ಹಾಕಿ ನಮ್ಮೆ ಲೋಗೊ ಅನಾವರಣ
admincoorgdaily


ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು ; ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕ್ರೀಡಾರಂಗಕ್ಕೆ ಹಿಂದಿನ ಯಾವುದೇ ಸರ್ಕಾರ ನೀಡಿದ್ದಕ್ಕಿಂತಲೂ ಹೆಚ್ಚಿನ ಅನುದಾನವನ್ನು ನೀಡುತ್ತಿದೆ ಎಂದು ರಾಜ್ಯದ ಉಪ ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವ ಜಿ ಪರಮೇಶ್ವರ್ ಅವರು ಹೇಳಿದರು.
ಕರ್ನಾಟಕ ಹಾಕಿ ಅಸೋಸಿಯೇಷನ್ ನಲ್ಲಿ ಭಾನುವಾರ ಸಂಜೆ 27 ನೇ ಅಜ್ಜಿಕುಟ್ಟೀರ ಕೌಟುಂಬಿಕ ಹಾಕಿ ಪಂದ್ಯಾಟದ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಆಯಾ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕ್ರೀಡೆಗಳ ಸುಸಜ್ಜಿತ ಆಟದ ಮೈದಾನವನ್ನು ನಿರ್ಮಿಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರವು ಒಲಿಂಪಿಕ್ಸ್ , ಕಾಮನ್ ವೆಲ್ತ್ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ದೇಶವನ್ನು ಪ್ರಿತಿನಿಧಿಸಿದ ಆಟಗಾರರಿಗೆ ಬಹುಮಾನದ ಮೊತ್ತವನ್ನು 25 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ ಎಂದು ತಿಳಿಸಿದರು. ಆಲ್ಲದೆ ಪೋಲೀಸ್ ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇಕಡಾ ಮೂರರಷ್ಟು ಮೀಸಲಾತಿ ನೀಡಿರುವುದಾಗಿ ತಿಳಿಸಿದರು. ಮುಂದೆ ರಾಜ್ಯ ಸರ್ಕಾರ ಒಟ್ಟು 72 ಸಾವಿರ ನೌಕರರ ನೇಮಕಾತಿ ಮಾಡಿಕೊಳ್ಳಲಿದ್ದು ಇದರಲ್ಲಿ 1500 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿರಿಸಿರುವುದಾಗಿ ತಿಳಿಸಿದರು. ಹಾಕಿ ರಾಷ್ಟ್ರೀಯ ಕ್ರೀಡೆ ಆಗಬೇಕು ಎಂದು ಪ್ರತಿಪಾದಿಸಿದ ಅವರು ರಾಜ್ಯ ಸರ್ಕಾರ ಎಲ್ಲಾ ರೀತಿಯ ಅನುದಾನ ಒದಗಿಸಲಿದೆ ಎಂದರು.
ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ಸುಸಜ್ಜಿತ ವಿಶ್ವ ದರ್ಜೆಯ ಕ್ರೀಡಾಂಗಣವನ್ನು ಹಾಗೂ ಕಬ್ಬನ್ ಪಾರ್ಕ್ ಮಾದರಿಯ ಪಾರ್ಕ್ ಗಳನ್ನು ನಿರ್ಮಿಸಲು ಸ್ಥಳ ಗುರುತಿಸುವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಹಾಗೂ ಶಾಂತಿನಗರದ ಶಾಸಕ ಎನ್ ಏ ಹ್ಯಾರಿಸ್ ಅವರಿಗೆ ಸೂಚಿಸಿದರು. ಈ ನಿರ್ಮಾಣಕ್ಕೆ ಎಷ್ಟೇ ಹಣ ವೆಚ್ಚವಾದರೂ ಅದನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಇಂದು ಕೊಡವ ಜನಾಂಗ ತನ್ನ ಶ್ರೀಮಂತ , ವಿಶಿಷ್ಟ ಸಂಸ್ಕೃತಿ , ಪ್ರತಿಭೆ ಹಾಗೂ ಪರಂಪರೆಯಿಂದ ಇಡೀ ದೇಶದ ಗಮನ ಸೆಳೆಯುತ್ತಿದೆ ಎಂದು ಶ್ಲಾಘಿಸಿದ ಸಚಿವರು ಭಾರತ ಈವರೆಗೆ ಹಾಕಿ ಕ್ರೀಡೆಯಲ್ಲಿ 8 ಬಾರಿ ಒಲಂಪಿಕ್ ಪದಕ ಗೆದ್ದಿದೆ ಎಂದರಲ್ಲದೆ ಇತ್ತೀಚೆಗೆ ಯುವ ಜನಾಂಗದಲ್ಲಿ ಕ್ರೀಡಾ ಆಸಕ್ತಿ ಕಡಿಮೆ ಆಗುತ್ತಿರುವುದಕ್ಕೆ ವಿಷಾದಿಸಿದರು. ವೀರಾಜಪೇಟೆ ಶಾಸಕ ಪೊನ್ನಣ್ಣ ಅವರು ಉತ್ಸಾಹದಿಂದ ಕೆಲಸ ಮಾಡುತಿದ್ದು ಅವರು ಕೊಡಗಿನ ಭವಿಷ್ಯದ ನಾಯಕ ಎಂದು ಬಣ್ಣಿಸಿದರು.
ಸಭೆಯಲ್ಲಿ ಮಾತನಾಡಿದ ಕೊಡಗು ಉಸ್ತುವಾರಿ ಸಚಿವ ಎಮ್ ಪಿ ನರೇಂದ್ರ ಸ್ವಾಮಿ ಅವರು ಮಾತನಾಡಿ ಕೊಡಗಿನ ಜನತೆ ಹಾಕಿ ಬಗ್ಗೆ ಹೊಂದಿರುವ ಪ್ರೀತಿ, ಆಸಕ್ತಿ ವಿಶ್ವದ ಗಮನ ಸೆಳೆಯುತ್ತಿದೆ ಎಂದರಲ್ಲದೆ ಕೊಡಗಿನ ಕನಿಷ್ಟ 50 ಆಟಗಾರರು ಪ್ರತೀ ವರ್ಷವೂ ಅಂತರ್ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುತಿದ್ದಾರೆ ಎಂದರು.
ಶಾಂತಿನಗರ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎನ್ ಏ ಹ್ಯಾರಿಸ್ ಮಾತನಾಡಿ ತಮ್ಮ ಸರ್ಕಾರವೂ ಸೇರಿದಂತೆ ಯಾವುದೇ ಸರ್ಕಾರ ಬಂದರೂ ಕ್ರೀಡಾ ರಂಗಕ್ಕೆ ನಿರೀಕ್ಷಿತ ಅನುದಾನ ಒದಗಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತೀ ಜಿಲ್ಲೆಯಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಈಗಲೇ ಕನಿಷ್ಟ 50 ಎಕರೆ ಜಾಗವನ್ನು ಮೀಸಲಾಗಿ ಇರಿಸಬೇಕೆಂದು ಅವರು ಕಂದಾಯ ಸಚಿವ ಪರಮೇಶ್ವರ್ ಅವರನ್ನು ಒತ್ತಾಯಿಸಿದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ ಎಸ್ ಅರುಣ್ ಮಾಚಯ್ಯ ಅವರು ಮಾತನಾಡಿ ಕೊಡಗಿಗೆ ರಾಜ್ಯ ಸರ್ಕಾರವು ಕ್ರೀಡಾ ರಂಗಕ್ಕೆ ಈಗಾಗಲೇ 70 ಕೋಟಿ ರೂಪಾಯಿಗಳ ಅನುದಾನ ನೀಡಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಏ ಎಸ್ ಬೋಪಣ್ಣ , ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಹಾಗೂ ಶಾಸಕ ಮತ್ತು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಏ ಎಸ್ ಪೊನ್ನಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶವನ್ನು ಪ್ರತಿನಿಧಿಸಿದ ಹಿರಿಯ ಹಾಕಿ ಆಟಗಾರರಾದ ಮೊಳ್ಳೇರ ಪಿ ಗಣೇಶ್, ಅಂಜಪರವಂಡ ಸುಬ್ಬಯ್ಯ, ಮನೆಯಪಂಡ ಸೋಮಯ್ಯ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ, ಚೇನಂಡ ನಿಕ್ಕಿನ್ ತಿಮ್ಮಯ್ಯ, ಚೆಪ್ಪುಡಿರ ಪೂಣಚ್ಚ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಹಾಕಿ ಅಸೋಸಿಯೇಷನ್ ಅದ್ಯಕ್ಷರಾದ ಸುನಿಲ್ ಕುಮಾರ್ ಗುಪ್ತ, ಪಾಂಡಂಡ ಬೋಪಣ್ಣ, ಅಜ್ಜಿಕುಟ್ಟಿರ ಕುಟುಂಬದ ಅದ್ಯಕ್ಷರಾದ ಸಜನ್ ಚಂಗಪ್ಪ, ಹಾಕಿ ಕ್ರೀಡಾಕೂಟದ ಅದ್ಯಕ್ಷರಾದ ನರೇನ್ ಚಂಗಪ್ಪ ಉಪಸ್ಥಿತರಿದ್ದರು.
ಅಜ್ಜಿಕುಟ್ಟಿರ ಸುನಿತಾ ಮತ್ತು ಗಿರೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಸಕ ಎ.ಎಸ್ ಪೊನ್ನಣ್ಣ ಸ್ವಾಗತಿಸಿದರು.