Kodagu

ಮಡಿಕೇರಿ ದಸರಾದಲ್ಲಿ ಡಿಜೆ ಬಳಕೆಗೆ ಹಿನ್ನಡೆ: ವಿಚಾರಣೆ ಅ.9ಕ್ಕೆ ಮುಂದೂಡಿದ ಹೈಕೋರ್ಟ್

admincoorgdaily

ಮಡಿಕೇರಿ ದಸರಾದಲ್ಲಿ ಡಿಜೆ ಬಳಕೆಗೆ ಹಿನ್ನಡೆ: ವಿಚಾರಣೆ ಅ.9ಕ್ಕೆ ಮುಂದೂಡಿದ ಹೈಕೋರ್ಟ್
ಮಡಿಕೇರಿ: ಮಡಿಕೇರಿ ದಸರಾ ಮಹೋತ್ಸವದಲ್ಲಿ ಡಿಜೆ ಬಳಕೆಗೆ ಅನುಮತಿ ಕೋರಿ ದಶಮಂಟಪ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಸಮಿತಿಗೆ ಹಿನ್ನಡೆಯಾಗಿದೆ.

ಡಿಜೆ ಬಳಕೆಗೆ ಅನುಮತಿ ಕೋರಿ ಸಮಿತಿಯು 2 ವಾರಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಮಿತಿ ಹೈಕೋರ್ಟ್ ಮೊರೆ ಹೋಗಿತ್ತು.

ಇಂದು ನಡೆದ ವಿಚಾರಣೆಯಲ್ಲಿ ಡಿಜೆ ಬಳಕೆ ಬಗ್ಗೆ ಹೈಕೋರ್ಟಿನಲ್ಲಿ ಈಗಾಗಲೇ ತಡೆಯಾಜ್ಞೆ ಇರುವುದನ್ನು ವಕೀಲ ಅಮೃತೇಶ್ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ದಸರಾ ಸಂದರ್ಭದಲ್ಲಿ ಡಿಜೆ ಬಳಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿದೆ.