ಬ್ಯಾಟರಿ ಲೋ, ಮೊಬೈಲ್ ಸ್ವಿಚ್ ಆಫ್: ಖಾತೆಯಲ್ಲಿದ್ದ 1.27 ಲಕ್ಷ ಮಾಯ!
admincoorgdaily

ಎ.ಎಸ್ ಮುಸ್ತಫ ಸಿದ್ದಾಪುರ
ಸಿದ್ದಾಪುರ: ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡು
ಸೈಬರ್ ವಂಚಕರು ಜನರನ್ನು ವಂಚಿಸುವುದು ಕಳೆದ ಕೆಲವು ವರ್ಷಗಳಿಂದ ಸಾಮಾನ್ಯವಾಗಿದೆ.
ಈ ಹಿಂದೆ ವಂಚನೆಗೆ ಓಟಿಪಿ ಹಾಗೂ ಎಪಿಕ್ ಪೈಲುಗಳನ್ನು ಹೆಚ್ಚಾಗಿ ಬಳಸುತ್ತಿದ್ದ ಸೈಬರ್ ಕದೀಮರು ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ವಂಚನೆಯ ಮಾರ್ಗ ಕೂಡ ಬದಲಾಯಿಸ ತೊಡಗಿದರು.
ಅನಾಮಿಕ ಲಿಂಕ್ ಗಳನ್ನು ಒತ್ತದೆ, ಓಟಿಪಿ ಪಡೆಯದೆ ವ್ಯಕ್ತಿಯೊಬ್ಬರು ರೂ. 1.27 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ.
ಅ. 3 ರಂದು ಸಿದ್ದಾಪುರದ ಬಟ್ಟೆ ವ್ಯಾಪಾರಿಯೊಬ್ಬರ ಮೊಬೈಲ್ ಫೋನ್ ಬ್ಯಾಟರಿ ಲೋ ಆದ ಕಾರಣ ಸ್ವಿಚ್ ಆಫ್ ಆಗಿತ್ತು. ಕೆಲವು ಸಮಯಗಳ ನಂತರ ಚಾರ್ಜ್ ಮಾಡಿದ ಮೊಬೈಲ್ ಹ್ಯಾಕ್ ಆಗಿದ ಅನುಭವ ಆಗಿದೆ. ಮೊಬೈಲ್ ನಲ್ಲಿದ್ದ ಯಾವುದೇ ಅಪ್ಲಿಕೇಶನ್ ಕೆಲಸ ಮಾಡುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಹಣ್ಣು ಕರೀದಿ ಮಾಡಿದ ಅಂಗಡಿಯವರಿಗೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಲು ಶ್ರಮಿಸಿದಾಗ ಖಾತೆಯಲ್ಲಿದ್ದ ಹಣ ಮಾಯವಾಗಿರುವುದು ಗಮನಕ್ಕೆ ಬಂದಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕೇವಲ 15 ನಿಮಿಷಗಳ ಸಮಯದಲ್ಲಿ ಖಾತೆಯಲ್ಲಿದ್ದ ಒಟ್ಟು ರೂ 1 ಲಕ್ಷದ 27 ಸಾವಿರ ಹಣವನ್ನು ಸೈಬರ್ ಕದೀಮರು ಎಗರಿಸಿದ್ದಾರೆ.
ಸೈಬರ್ ಕ್ರೈಮ್ ಸಹಾಯ ವಾಣಿಯ ಮೊರೆ ಹೋದ ಸಂತ್ರಸ್ತ: ಮೊಬೈಲ್ ಹ್ಯಾಕ್ ಮೂಲಕ ವ್ಯಕ್ತಿಯ ಸಿದ್ದಾಪುರ ಶಾಖೆಯ ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಿಂದ ಹಂತಹಂತವಾಗಿ 1.27 ಲಕ್ಷ ಸೈಬರ್ ವಂಚನೆ ಆಗಿರುವ ಬಗ್ಗೆ ಸಂತ್ರಸ್ತ ತಕ್ಷಣ ಎಚ್ಚೆತ್ತುಕೊಂಡು ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ ಘಟನೆ ಬಗ್ಗೆ ದೂರು ನೀಡಲಾಗಿದೆ. ಹಣ ಕಳೆದುಕೊಂಡ ತಕ್ಷಣ ಸೈಬರ್ ಸಹಾಯ ವಾಣಿಯ ಮೊರೆ ಹೋಗಿರುವುದರಿಂದ ಹಣ ವಂಚಕರ ಕೈ ಸೇರದಂತೆ ತಡೆಹಿಡಿಯಲು ಸಾಧ್ಯವಾಗಬಹುದು ಎನ್ನಲಾಗಿದೆ.