State News

ಬೆಂಗಳೂರು: ಕಾರಿನೊಳಗೆ ವಿರಾಜಪೇಟೆ ಮೂಲದ ವ್ಯಕ್ತಿ ಶವವಾಗಿ ಪತ್ತೆ

admincoorgdaily

ಬೆಂಗಳೂರು: ಕಾರಿನೊಳಗೆ ವಿರಾಜಪೇಟೆ ಮೂಲದ ವ್ಯಕ್ತಿ ಶವವಾಗಿ ಪತ್ತೆ
ಬೆಂಗಳೂರು:ಮಧ್ಯರಾತ್ರಿ ಹೋಟೆಲ್ ಮುಂದೆ ಬಂದು ನಿಂತಿದ್ದ ಐಷಾರಾಮಿ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ಮೂಲತಃ ಕೊಡಗು ಜಿಲ್ಲೆಯ  ವಿರಾಜಪೇಟೆಯವರಾದ ಸಲೀಂ ಅಕ್ಬರ್ (46) ಎಂದು ಗುರುತಿಸಲಾಗಿದೆ.

ರಾತ್ರಿ ಸುಮಾರು 1 ಗಂಟೆ ವೇಳೆಗೆ ಠಾಣೆ ಎದುರಿನ ಹೋಟೆಲ್ ಬಳಿ ಕಾರು ಬಂದು ನಿಂತಿದೆ ಎಂದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಗಮನಿಸಿದಾಗ ಕಾರಿನೊಳಗೆ ಮೃತದೇಹ ಇರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಧಾವಿಸಿದ ಶ್ವಾನದಳ, ಬೆರಳಚ್ಚು ತಜ್ಞರ (SOCO) ತಂಡ ಹಾಗೂ ಕೋರಮಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.

ಮೃತ ಅಕ್ಬರ್ ಅವರ ಹಿನ್ನೆಲೆ ಹಾಗೂ ಅವರು ರಾತ್ರಿ ಎಲ್ಲಿಗೆ ತೆರಳಿದ್ದರು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.