Kodagu

ರಸ್ತೆ, ಭೂಮಿ, ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಜಾಥಾ

admincoorgdaily

ರಸ್ತೆ, ಭೂಮಿ, ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಜಾಥಾ
ಮಡಿಕೇರಿ: ಕೊಡಗು ಜಿಲ್ಲೆಯ ರಸ್ತೆ, ಭೂಮಿ, ಆರೋಗ್ಯ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಬಹುಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ನ.೨೦ ರಂದು ವಿರಾಜಪೇಟೆಯಿಂದ ಮಡಿಕೇರಿವರೆಗೆ ಹಾಗೂ ನ.೨೩ ರಂದು ಬೆಟ್ಟದಳ್ಳಿಯಿಂದ ಸೋಮವಾರಪೇಟೆಯವರೆಗೆ ಜನಜಾಗೃತಿ ಜಾಥಾ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.

ಹದಗೆಟ್ಟ ಗ್ರಾಮೀಣ ರಸ್ತೆಗಳು, ಸಿ ಮತ್ತು ಡಿ ಭೂಮಿ ಗೊಂದಲ, ವನ್ಯಜೀವಿ ದಾಳಿ, ಅರಣ್ಯ ಎಂದು ಗುರುತಿಸಲ್ಪಡುತ್ತಿರುವ ಕೃಷಿ ಭೂಮಿ ಹಾಗೂ ಔಷಧಿ ಕೊರತೆಯಿಂದ ಬಳಲುತ್ತಿರುವ ಆಸ್ಪತ್ರೆಗಳು ಜಿಲ್ಲೆಯ ಜನರ ದೈನಂದಿನ ಬದುಕನ್ನು ಕಾಡುತ್ತಿವೆ. ಈ ಸಮಸ್ಯೆಗಳನ್ನು ಜನರ ಮುಂದಿಡುವುದು ಜಾಥಾದ ಉದ್ದೇಶವಾಗಿದೆ. ಮಾರ್ಗಮಧ್ಯೆ ವಿವಿಧ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಅನುಭವಗಳನ್ನು ಆಲಿಸಲಾಗುವುದು. ಮಡಿಕೇರಿಯಲ್ಲಿ ಸಭೆಯ ಬಳಿಕ ಮಡಿಕೇರಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕೊಡಗು ಜಿಲ್ಲೆಯ ರಸ್ತೆಗಳ ಸ್ಥಿತಿ ಅತ್ಯಂತ ಹೀನಾಯವಾಗಿದ್ದು, ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಅಧೋಗತಿಗೆ ತಲುಪಿವೆ. ಜಿಲ್ಲೆಯ ಇಬ್ಬರು ಶಾಸಕರು ರಸ್ತೆ ಅಭಿವೃದ್ಧಿ ಸೇರಿದಂತೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಪ್ರಮುಖರಾದ ಮನು ಮುತ್ತಪ್ಪ ಇದ್ದರು.