ಸೋಮವಾರಪೇಟೆಯಲ್ಲಿ ಕಾಫಿಗೆ ಬ್ಲ್ಯಾಕ್ ರಾಟ್ ರೋಗ: ಬೆಳೆಗಾರರು ಕಂಗಾಲು, ಪರಿಹಾರಕ್ಕೆ ಒತ್ತಾಯ
admincoorgdaily

ಸೋಮವಾರಪೇಟೆ: ಈ ವರ್ಷ ಮಳೆಯ ಪ್ರಮಾಣದಲ್ಲಿ ಏರುಪೇರಾಗಿರುವ ಪರಿಣಾಮ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಕಾಯಿಗಳಲ್ಲಿ ಕಪ್ಪು ಕೊಳೆ (ಬ್ಲ್ಯಾಕ್ ರಾಟ್) ರೋಗ ಕಾಣಿಸಿಕೊಂಡು ಕಾಯಿ ಉದುರುವಿಕೆ ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಂಡು ಪರಿಹಾರ ಕಲ್ಪಿಸಬೇಕು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಬಿ.ಎಂ. ಅವರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದೆ ಕಾಫಿ ಗಿಡಗಳಲ್ಲಿ ಹೂ ಅರಳುವಿಕೆ ವಿಳಂಬವಾಗಿದೆ. ಬಳಿಕ ಆಗಾಗ ಸಣ್ಣ ಪ್ರಮಾಣದ ಮಳೆಯಾದ ಕಾರಣ ಹಲವು ಹಂತಗಳಲ್ಲಿ ಹೂ ಬಿಟ್ಟಿವೆ. ಇದರಿಂದ ಕಾಯಿಗಳ ಬೆಳವಣಿಗೆ ಮೇಲೂ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಜುಲೈ ಕೊನೆಯ ವಾರದಿಂದ ಆರಂಭವಾದ ಭಾರೀ ಮಳೆಯಿಂದ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಬ್ಲ್ಯಾಕ್ ರಾಟ್ ರೋಗ ಕಾಣಿಸಿಕೊಂಡಿದ್ದು, ಕಾಯಿಗಳು ಉದುರುತ್ತಿವೆ. ಇದರಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಔಷಧೋಪಚಾರದ ಬಗ್ಗೆ ತೋಟಗಾರಿಕಾ ಇಲಾಖೆ ಹಾಗೂ ಕಾಫಿ ಮಂಡಳಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮೋಡ ಬಿತ್ತನೆ ಕೊಡಗಿಗೆ ಅವಶ್ಯಕತೆ ಇಲ್ಲ. ಮಳೆಯ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
ಅಲ್ಲದೆ, ಕಸ್ತೂರಿರಂಗನ್ ವರದಿ ಜಾರಿ ಹಾಗೂ ಪರಿಸರ ಸೂಕ್ಷ್ಮ ವಲಯ (ESZ) ವಿಸ್ತರಣೆಯಿಂದ ಕಾಫಿ ಬೆಳೆಗಾರರು ಸೇರಿದಂತೆ ರೈತರ ಬದುಕು ಅತಂತ್ರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಂಘ, ಅವೈಜ್ಞಾನಿಕವಾಗಿ ಇಎಸ್‌ಜೆಡ್ ವ್ಯಾಪ್ತಿ ವಿಸ್ತರಿಸುವುದನ್ನು ವಿರೋಧಿಸಿದೆ. ಕಸ್ತೂರಿರಂಗನ್ ವರದಿಯಿಂದ ಕೊಡಗಿನ ಗ್ರಾಮಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ವರದಿ ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದನ್ನು ಸ್ವಾಗತಿಸಿದೆ.