Kodagu

ಗೋಣಿಕೊಪ್ಪ ದಸರಾದಲ್ಲಿ ರಕ್ತದಾನ ಶಿಬಿರ:43ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ಅರುಣ್ ಕುಮಾರ್

admincoorgdaily

ಗೋಣಿಕೊಪ್ಪ ದಸರಾದಲ್ಲಿ ರಕ್ತದಾನ ಶಿಬಿರ:43ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ ಅರುಣ್ ಕುಮಾರ್
ಪೊನ್ನಂಪೇಟೆ,15: 48ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವದ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಬುಧವಾರ ಗೋಣಿಕೊಪ್ಪ ಪಟ್ಟಣದ ಕೆಪಿಎಸ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಸಮಾಜದಲ್ಲಿ ರಕ್ತದ ಕೊರತೆಯನ್ನು ನೀಗಿಸುವುದು ಹಾಗೂ ಯುವಜನರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಬಯ್ಯ ಅವರ ನೇತೃತ್ವದ ವೈದ್ಯಕೀಯ ತಂಡ ರಕ್ತ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು.

48ನೇ ಶ್ರೀ ಕಾವೇರಿ ದಸರಾ ಜನೋತ್ಸವದ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕಾವೇರಿ ದಸರಾ ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ರಕ್ತದಾನದಂತಹ ಜೀವ ಉಳಿಸುವ ಸಮಾಜಮುಖಿ ಕಾರ್ಯಕ್ರಮಗಳನ್ನೂ ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಎನ್. ಪ್ರಕಾಶ್ ಮಾತನಾಡಿ, ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಸೇವೆಯಾಗಿದ್ದು, ಆರೋಗ್ಯವಂತರು ವೈದ್ಯಕೀಯ ಮಾರ್ಗಸೂಚಿಗಳಂತೆ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಸಂಸ್ಥೆಯ ಉಪಸಭಾಪತಿ ದಿಲನ್ ಚಂಗಪ್ಪ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಹಿರಿಯ ಪತ್ರಕರ್ತ ಜೋಡುಬೀಟಿ ಜಗದೀಶ್ ರಕ್ತದಾನದ ಮಹತ್ವ ಮತ್ತು ಆರೋಗ್ಯದ ಕಾಳಜಿಯ ಕುರಿತು ಮಾತನಾಡಿದರು.

43ನೇ ಬಾರಿ ರಕ್ತದಾನ ಮಾಡಿದ ಪತ್ರಕರ್ತ

ಶಿಬಿರದ ವಿಶೇಷ ಆಕರ್ಷಣೆಯಾಗಿದ್ದ ಪತ್ರಕರ್ತ ಅರುಣ್ ಕುಮಾರ್ ಅವರು ಈಗಾಗಲೇ 42 ಬಾರಿ ರಕ್ತದಾನ ಮಾಡಿದ್ದು, ಬುಧವಾರ 43ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಅವರ ನಿರಂತರ ಸಮಾಜಮುಖಿ ಸೇವೆಯನ್ನು ಶಿಬಿರದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಶ್ಲಾಘಿಸಿ, ಅಭಿನಂದಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಚಂದನ್ ಕಾಮತ್, ರಾಜಶೇಖರ್, ಗಣೇಶ್ ರೈ, ಆ್ಯಂಥೋನಿ, ಮಧು ದೇವಯ್ಯ ಹಾಗೂ ಶಿವಾಜಿ, ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯದರ್ಶಿ ವರಲಕ್ಷ್ಮಿ, ಸಮಿತಿಯ ಪದಾಧಿಕಾರಿಗಳು ಮತ್ತು ಪಟ್ಟಣದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.