Kodagu

ಬಾಡಿಗೆ ಟ್ಯಾಬ್ಲೋಗೆ ಬ್ರೇಕ್; ಪುಟಾಣಿನಗರ ಯುವಕರ ಕೈಚಳಕಕ್ಕೆ ಗಣೇಶೋತ್ಸವದಲ್ಲಿ ವಿಶೇಷ ಮೆರುಗು!

admincoorgdaily

ಬಾಡಿಗೆ ಟ್ಯಾಬ್ಲೋಗೆ ಬ್ರೇಕ್; ಪುಟಾಣಿನಗರ ಯುವಕರ ಕೈಚಳಕಕ್ಕೆ ಗಣೇಶೋತ್ಸವದಲ್ಲಿ ವಿಶೇಷ ಮೆರುಗು!
ಮಲ್ಲಿಕಾರ್ಜುನ್ ಮಡಿಕೇರಿ

ಮಡಿಕೇರಿ:-ಗಣೇಶೋತ್ಸವ ಅಂದ್ರೆ ಸಂಭ್ರಮ… ಶ್ರದ್ಧೆ ಭಕ್ತಿ.ಗಣಪತಿ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಅಂದ್ರೆ, ಕಣ್ಮನ ಸೆಳೆಯುವ ಟ್ಯಾಬ್ಲೋಗಳು ಕೂಡ ಪ್ರಮುಖ ಆಕರ್ಷಣೆ.
ಆದ್ರೆ, ಪುಟಾಣಿನಗರದ ಈ ಯುವಕರ ತಂಡ ಮಾತ್ರ ಬಾಡಿಗೆಗೆ ಟ್ಯಾಬ್ಲೋ ತಂದು ಮೆರವಣಿಗೆ ಮಾಡೋದಕ್ಕೆ ಮುಂದಾಗಿಲ್ಲ.ತಮ್ಮ ಕಲ್ಪನೆಗೆ ಬಣ್ಣ ಹಚ್ಚಿ… ತಮ್ಮ ಕೈಗಳಿಂದಲೇ ಬೃಹತ್ ಟ್ಯಾಬ್ಲೋವೊಂದನ್ನು ನಿರ್ಮಿಸಿ, ಗಣಪತಿ ಶೋಭಾಯಾತ್ರೆಗೆ ಸಿದ್ಧಗೊಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಶ್ರಮಿಸಿರುವ ಈ ಯುವಕರ ಕಲಾ ಪ್ರಯತ್ನ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.


ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಸಜ್ಜಾಗಿರುವ ಪುಟಾಣಿನಗರ…
ಇಲ್ಲಿ ಗಣಪತಿ ಮೂರ್ತಿಯೊಂದಿಗೆ ಸಾಗಲಿರುವುದು ಕೇವಲ ಟ್ಯಾಬ್ಲೋ ಅಲ್ಲ…ಇದು ಸ್ಥಳೀಯ ಯುವಕರ ಒಂದೂವರೆ ತಿಂಗಳ ಪರಿಶ್ರಮದ ಫಲ.ಸಾಮಾನ್ಯವಾಗಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬಾಡಿಗೆಗೆ ತಂದ ಟ್ಯಾಬ್ಲೋಗಳು, ವಿದ್ಯುತ್ ದೀಪಾಲಂಕಾರಗಳು ಅಥವಾ ವಿವಿಧ ದೇವಾಲಯಗಳ ಮಾದರಿಗಳು ಕಾಣಸಿಗುತ್ತವೆ.
ಆದರೆ ಪುಟಾಣಿನಗರದ ಯುವಕರು ಇದಕ್ಕೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಯಾರ ಬಳಿಯೂ ಟ್ಯಾಬ್ಲೋ ಬಾಡಿಗೆಗೆ ಪಡೆಯದೇ…
ತಮ್ಮ ಏರಿಯ ಯುವಕರೇ ಒಂದಾಗಿ, ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಈ ಬೃಹತ್ ಟ್ಯಾಬ್ಲೋವನ್ನು ನಿರ್ಮಿಸಿದ್ದಾರೆ.

ಯುವಕರ ಪರಿಶ್ರಮ
ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಕಲಾವಿದರು ಹಾಗೂ ಯುವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಂಗವೇಲ್ ಅವರ ನೇತೃತ್ವದಲ್ಲಿ ಕಾವೇರಪ್ಪ, ಧನುಷ್, ದರ್ಶನ್, ರಂಜಿತ್, ವಿಘ್ನೇಶ್ ಬಾಬು, ನಿತೀನ್, ವಿಘ್ನೇಶ್, ವಿಶಾಲ್, ಪ್ರವೀಣ್ ಸೇರಿದಂತೆ ಹಲವಾರು ಯುವಕರು ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಕೆಲಸ ಮಾಡಿದ್ದಾರೆ.
ಹಗಲಿನಲ್ಲಿ ತಮ್ಮ ಕೆಲಸ…
ಸಂಜೆಯಾದರೆ ಟ್ಯಾಬ್ಲೋ ನಿರ್ಮಾಣ…ರಾತ್ರಿಯಾದರೂ ಕೆಲಸಕ್ಕೆ ವಿರಾಮವಿಲ್ಲ…
ತಮ್ಮ ಕೈಯಿಂದ ಮೂಡಿಬರಬೇಕಾದ ಕಲಾಕೃತಿಗಾಗಿ ಈ ಯುವಕರು ಹಗಲು-ರಾತ್ರಿ ಶ್ರಮಿಸಿದ್ದಾರೆ.

ವಿಶೇಷತೆ ಇವರ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಿದೆ:

ಬೃಹತ್ ಟ್ಯಾಬ್ಲೋ ಈಗಾಗಲೇ ಬಹುತೇಕ ಸಿದ್ಧಗೊಂಡಿದ್ದು, ಭಾನುವಾರ ನಡೆಯಲಿರುವ ಪುಟಾಣಿನಗರದ ಗಣಪತಿ ಮೂರ್ತಿಯ ಶೋಭಾಯಾತ್ರೆಯಲ್ಲಿ ಇದು ಪ್ರಮುಖ ಆಕರ್ಷಣೆಯಾಗಲಿದೆ.ಇನ್ನು ವಿಶೇಷ ಅಂದ್ರೆ…
ಈ ಯುವಕರು ನಿರ್ಮಿಸಿರುವ ಟ್ಯಾಬ್ಲೋ ನೋಡಿದ ಕೆಲ ಗಣಪತಿ ಸಂಘಗಳ ಯುವಕರು, ತಮ್ಮ ಕಾರ್ಯಕ್ರಮಕ್ಕೂ ಇದೇ ಟ್ಯಾಬ್ಲೋವನ್ನು ಬಳಸಿಕೊಳ್ಳಲು ಬಾಡಿಗೆಗೆ ಕೇಳಿಕೊಂಡಿದ್ದಾರೆ.
ಆದರೆ ಈ ಯುವಕರ ಉದ್ದೇಶ ಮಾತ್ರ ಹಣ ಸಂಪಾದನೆಯಲ್ಲ.
ಯಾವುದೇ ಫಲಾಪೇಕ್ಷೆ ಇಲ್ಲದೆ, ಅಗತ್ಯವಿರುವ ಗಣಪತಿ ಸಂಘಗಳಿಗೆ ಉಚಿತವಾಗಿ ಟ್ಯಾಬ್ಲೋವನ್ನು ನೀಡಲು ಮುಂದಾಗಿದ್ದಾರೆ.

ಗಣಪತಿಯ ಮೇಲಿನ ಭಕ್ತಿಯ ಜೊತೆಗೆ…
ಕಲೆಯ ಮೇಲಿನ ಪ್ರೀತಿ…
ಒಗ್ಗಟ್ಟಿನ ಶಕ್ತಿ…
ಮತ್ತು ಯುವಕರ ಸೃಜನಶೀಲತೆಗೆ ಸಾಕ್ಷಿಯಾಗಿರುವುದು ಪುಟಾಣಿನಗರದ ಈ ಟ್ಯಾಬ್ಲೋ. ಬಾಡಿಗೆಗೆ ತಂದ ಕಲಾಕೃತಿಯಲ್ಲ…
ತಮ್ಮ ಬೆವರಿನಿಂದ, ತಮ್ಮ ಕಲ್ಪನೆಯಿಂದ ಕಟ್ಟಿದ ಕಲಾ ಮಂಟಪ ಇದು.‌ಭಾನುವಾರದ ಗಣಪತಿ ಶೋಭಾಯಾತ್ರೆಯಲ್ಲಿ ಈ ಟ್ಯಾಬ್ಲೋ ಜನರ ಕಣ್ಮನ ಸೆಳೆಯಲು ಸಜ್ಜಾಗಿದೆ.
ಪುಟಾಣಿನಗರದ ಯುವಕರ ಈ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
1002464775.jpg