Kodagu

ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಹೋದರರಿಗೆ ಬೆಳ್ಳಿ ಪದಕ

admincoorgdaily

ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಹೋದರರಿಗೆ ಬೆಳ್ಳಿ ಪದಕ
ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರಪೇಟೆಯ ಇಬ್ಬರು ಸಹೋದರರು ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಸೋಮವಾರಪೇಟೆಯ ಪಿ.ಎಂ. ಶ್ರೀ ಶಾಲೆಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ರಿತನ್ ಡಿ.ಎಸ್. ಹಾಗೂ 3ನೇ ತರಗತಿ ವಿದ್ಯಾರ್ಥಿ ರಿಷಿ ಡಿ.ಎಸ್. ಬೆಳ್ಳಿ ಪದಕ ಗಳಿಸಿ ಗಮನ ಸೆಳೆದಿದ್ದಾರೆ.

ಕುಮಾರ ರಿತನ್ ಡಿ.ಎಸ್. ಅವರು ಈ ವರ್ಷ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಮೂರನೇ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗಳಿಸಿದ್ದರು. ಅವರ ಸಾಧನೆಯನ್ನು ಗುರುತಿಸಿ ಶಾಸಕರಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು.

ಪದಕ ವಿಜೇತ ಇಬ್ಬರೂ ಸಹೋದರರು ಸೋಮವಾರಪೇಟೆ ಸಮೀಪದ ಎಡವನಾಡು ಗ್ರಾಮದ ಆಶಾ ಹಾಗೂ ಚೇತನ್ ದಂಪತಿಯ ಪುತ್ರರಾಗಿದ್ದಾರೆ. ಸಹೋದರರ ಕ್ರೀಡಾ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.