Kodagu

ಕೊಡಗಿನಲ್ಲಿ ಕಂದು ಬಣ್ಣದ ಮಳೆ

admincoorgdaily

ಕೊಡಗಿನಲ್ಲಿ ಕಂದು ಬಣ್ಣದ ಮಳೆ
ಮಡಿಕೇರಿ:-ಕೊಡಗು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭಗೊಂಡ ಮಳೆ ಇಂದೂ ಮುಂದುವರಿದಿದ್ದು, ಇದರ ನಡುವೆಯೇ ಮಳೆ ನೀರು ಕಂದು ಬಣ್ಣಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.

ಮಡಿಕೇರಿ ತಾಲೂಕಿನ ಎಮ್ಮೆಮಾಡು, ಮರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹಿಸಿದ ಮಳೆ ನೀರು ಕಂದು ಬಣ್ಣದಿಂದ ಕೂಡಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಪಾರದರ್ಶಕವಾಗಿ ಕಾಣುವ ಮಳೆ ನೀರು ಈ ರೀತಿ ಬಣ್ಣ ಬದಲಾಗಿರುವುದಕ್ಕೆ ಕಾರಣವೇನು ಎಂಬ ಗೊಂದಲ ಸ್ಥಳೀಯರಲ್ಲಿ ಮನೆಮಾಡಿದೆ.

ಮೋಡ ಬಿತ್ತನೆ ಚರ್ಚೆ:

ಮೋಡ ಬಿತ್ತನೆ ಮಾಡಲಾಗಿದೆಯೇ? ಅದರಿಂದಲೇ ನೀರು ಕಂದು ಬಣ್ಣಕ್ಕೆ ತಿರುಗಿದೆಯೇ ಎಂಬ ಗುಮಾನಿ ಕೆಲವರಲ್ಲಿ ವ್ಯಕ್ತವಾಗಿದೆ. ಆದರೆ ಪರಿಸರ ತಜ್ಞರ ಪ್ರಕಾರ, ಇದಕ್ಕೆ ನೈಸರ್ಗಿಕ ಕಾರಣಗಳೂ ಇರಬಹುದು.

ಮಳೆ ಸುರಿಯುವ ವೇಳೆ ವಾತಾವರಣದಲ್ಲಿರುವ ಧೂಳು, ಮಣ್ಣಿನ ಸೂಕ್ಷ್ಮ ಕಣಗಳು, ಪರಾಗ ಕಣಗಳು ಮಳೆಯೊಂದಿಗೆ ಕೆಳಗೆ ಬರುವುದರಿಂದ ನೀರಿನ ಬಣ್ಣ ಬದಲಾಗುವ ಸಾಧ್ಯತೆ ಇದೆ. ಹಲವು ದಿನಗಳ ನಂತರ ಜೋರು ಮಳೆ ಬಂದಾಗ ಆರಂಭದಲ್ಲಿ ಈ ರೀತಿ ಆಗುವುದು ಸಹಜ ಎನ್ನಲಾಗುತ್ತಿದೆ.

ಆದರೂ ನಿಖರ ಕಾರಣ ತಿಳಿಯಲು ವೈಜ್ಞಾನಿಕ ಪರೀಕ್ಷೆ ಅಗತ್ಯ. ಕಂದು ಬಣ್ಣದ ಮಳೆ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರಿಶೀಲಿಸಿ, ನೈಜ ಕಾರಣ ಪತ್ತೆಹಚ್ಚಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.