ಕಾಫಿ ತೋಟದಲ್ಲಿ ಬಟರ್ ಫ್ರೂಟ್ ಕಳ್ಳತನ: ಚಿಗುರು-ಕಾಯಿ ಕದ್ದಿದ್ದ ಐವರು ಅಂದರ್
admincoorgdaily

ಮಡಿಕೇರಿ: ತೋಟದೊಳಗೆ ಬೆಳೆಸಿದ್ದ ಅವಕಾಡೋ (ಬಟರ್ ಫ್ರೂಟ್) ಗಿಡಗಳ ಚಿಗುರು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತ್ಯಾಗತ್ತೂರು ಗ್ರಾಮದ ನಿವಾಸಿಗಳಾದ ಸಿದ್ದೀಕ್, ನಿಸಾರ್, ಹ್ಯಾರಿಸ್ ಹಾಗೂ ಕೂಡ್ಲೂರು - ಚೆಟ್ಟಳ್ಳಿ ನಿವಾಸಿಗಳಾದ ವಿನೋದ್, ಶಕೀಲ್ ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:ಕುಶಾಲನಗರ ತಾಲ್ಲೂಕಿನ
ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆ ನಿವಾಸಿ ಹಾಗೂ ಉದ್ಯಮಿ ಕೆ.ಬಿ. ಹಸೈನಾರ್ ಅವರಿಗೆ ಸೇರಿದ ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿರುವ ಕಾಫಿ ತೋಟದಲ್ಲಿ ಕೃಷಿ ಮಾಡಿ ಬೆಳೆಸಿದ್ದ ಅವಕಾಡೋ (ಬೆಣ್ಣೆ ಹಣ್ಣು) ಗಿಡಗಳಿಂದ ಇತ್ತೀಚೆಗೆ ಚಿಗುರು ಹಾಗೂ ಕಾಯಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹುಸೈನಾರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರು ತೋಟದೊಳಗೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. 60 ಸಾವಿರಕ್ಕೂ ಅಧಿಕ ಮೌಲ್ಯದ ಅವಕಾಡೋ ಚಿಗುರುಗಳನ್ನು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಮಡಿಕೇರಿ ವಿಭಾಗದ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ರಾಜೇಶ್, ಭರತ್, ಮಣಿಕಂಠ ಹಾಗೂ ಇತರರು ಪಾಲ್ಗೊಂಡಿದ್ದರು.