Kodagu

ಬ್ಯಾಡಗೊಟ್ಟ SIR ಅಕ್ರಮ: ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ದೂರು

admincoorgdaily

ಬ್ಯಾಡಗೊಟ್ಟ SIR ಅಕ್ರಮ: ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ದೂರು

ಮಡಿಕೇರಿ;ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ SIR ಪ್ರಕ್ರಿಯೆಯಲ್ಲಿ ಫಾರಂ-7 ಮೂಲಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ವತಿಯಿಂದ ಇಂದು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.

ಈ ಕುರಿತು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ ಶಾಸಕ ಡಾ. ಮಂತರ್ ಗೌಡ, "ಬ್ಯಾಡಗೊಟ್ಟ ವ್ಯಾಪ್ತಿಯ ಬೂತ್ ನಂ.20 (ಹಳೆಯ) ಹಾಗೂ 21 (ಹೊಸ) ರಲ್ಲಿ ಸುಮಾರು 60ರಿಂದ 65 ಫಾರಂ-7 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಒಬ್ಬರೇ ವ್ಯಕ್ತಿ ಸುಮಾರು 10 ಅರ್ಜಿಗಳಿಗೆ ಸಹಿ ಹಾಕಿರುವುದು ಕಂಡುಬಂದಿದೆ" ಎಂದರು.

"ಈ ಕುರಿತು ಪಕ್ಷದ BLA ಮೂಲಕ ಮಾಹಿತಿ ಲಭ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಮಹಿಳೆ ಮತ್ತು ವ್ಯಕ್ತಿಯೊಬ್ಬರು ಫಾರಂ-7 ಅರ್ಜಿಗಳನ್ನು ಪಕ್ಷದ ಕಚೇರಿಯಲ್ಲಿಯೇ ನೀಡಲಾಗಿದೆ ಎಂದು ಹೇಳಿರುವುದು ಗಮನಕ್ಕೆ ಬಂದಿದೆ. ಇಂತಹ ಘಟನೆಗಳು ಇತರೆ ಪ್ರದೇಶಗಳಲ್ಲೂ ನಡೆಯುತ್ತಿವೆ" ಎಂದು ದೂರಿದರು.

"ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಯಾವುದೇ ಕಾರಣಕ್ಕೂ ಮತದಾರರ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು. ಚುನಾವಣಾ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಅವಕಾಶವಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ ಒಂದು ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು" ಎಂದು ತಿಳಿಸಿದರು.

"ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಜವಾಬ್ದಾರಿ. ಈ ಹಕ್ಕನ್ನು ಉದ್ದೇಶಪೂರ್ವಕವಾಗಿ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡರೆ ಯಾರೂ ಕ್ಷಮಿಸುವುದಿಲ್ಲ. ಅಕ್ರಮ ಎಸಗಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ಪ್ರಕ್ರಿಯೆ ಮುಂದುವರಿಸಲಾಗುವುದು" ಎಂದು ಶಾಸಕ ಮಂತರ್ ಗೌಡ ಹೇಳಿದ್ದಾರೆ.