Kodagu

ಕಾರು-ಸ್ಕೂಟರ್ ಡಿಕ್ಕಿ: ಸೋಮವಾರಪೇಟೆಯ ಯುವಕ ಸಾವು

admincoorgdaily

ಕಾರು-ಸ್ಕೂಟರ್ ಡಿಕ್ಕಿ: ಸೋಮವಾರಪೇಟೆಯ ಯುವಕ ಸಾವು
ಕಡಬ:ಬಿಳಿನೆಲೆ ಗ್ರಾಮದ ಕೋಟೆ ಹೊಳೆ ಸೇತುವೆ ಬಳಿ ಕಾರು-ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೋಮವಾರಪೇಟೆ ನಿವಾಸಿ ಯುವಕ ಮೃತಪಟ್ಟಿದ್ದಾರೆ.

ನವೆಂಬರ್ 27ರಂದು ಬೆಳಿಗ್ಗೆ ಸೋಮವಾರಪೇಟೆ ನಿವಾಸಿ ವಿಶ್ವಾಸ್ (31) ಅವರು ಕೆಎ-01-ಎಚ್‌ಎಕ್ಸ್-1968 ನೋಂದಣಿಯ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕೆಎ-12-ಎಂಎ-8653 ನೋಂದಣಿಯ ಕಾರನ್ನು ಚಾಲಕ ನಂದನ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಮೇತ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಡಬ ಕಡೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 146/2026, ಕಲಂ: 281, 106 ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.