ಗೊಂದಲದ ನಡುವೆಯೇ ನಡೆದ ಕಾವೇರಿ ದಸರಾ ಸಮಿತಿ ಮಹಾಸಭೆ
admincoorgdaily

ಗೋಣಿಕೊಪ್ಪ, ಸೆ.10: ಶ್ರೀ ಕಾವೇರಿ ದಸರಾ ಸಮಿತಿಯ 2025ನೇ ಸಾಲಿನ ಮಹಾಸಭೆ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಲೆಕ್ಕಪತ್ರ ಮಂಡನೆ, ದಶಮಂಟಪಗಳಿಗೆ ನೀಡಿದ ಅನುದಾನ ಹಾಗೂ 2026ನೇ ಸಾಲಿನ ದಸರಾ ಸಮಿತಿ ರಚನೆ ಕುರಿತು ಸದಸ್ಯರ ನಡುವೆ ಚರ್ಚೆ ನಡೆಯಿತು. ಲೆಕ್ಕಪತ್ರದಲ್ಲಿ ಕೆಲವು ಲೋಪದೋಷಗಳಿವೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ದಶಮಂಟಪಗಳಿಗೆ ರೂ.2.30 ಲಕ್ಷ ನೀಡುವುದಾಗಿ ಭರವಸೆ ನೀಡಿ ರೂ.2 ಲಕ್ಷ ನೀಡಿರುವ ಕುರಿತು ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಪ್ರಶ್ನಿಸಿದರು.
ನಾಡಹಬ್ಬ ದಸರಾ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಮಾತನಾಡಿ, ದಸರಾ ಆಚರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದ್ದು, ಹಳೆಯ ಸ್ಥಾಪಕ ಸದಸ್ಯರು, ದಶಮಂಟಪಗಳ ಪದಾಧಿಕಾರಿಗಳು ಹಾಗೂ ಹಾಲಿ ಸಮಿತಿ ಸದಸ್ಯರನ್ನು ಒಳಗೊಂಡಂತೆ ನೂತನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ನವಚೇತನ ದಸರಾ ಸಮಿತಿ ಪ್ರಧಾನ ಸಂಚಾಲಕ ಜಲೀಲ್, 2026ನೇ ಸಾಲಿಗೆ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರಾಗಿ ಹಾಗೂ ಪಂಚಾಯಿತಿ ಪಿಡಿಒ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ವರ ದಸರಾ ಸಮಿತಿ ಗೌರವಾಧ್ಯಕ್ಷ ಮುರುಗ, ಹಾಲಿ ಅಧ್ಯಕ್ಷರೇ ಮುಂದುವರಿಯಬೇಕು ಎಂಬ ನಿಯಮ ಬೈಲಾದಲ್ಲಿ ಇಲ್ಲ. ಸಾಮಾನ್ಯ ಸಭೆಯ ಒಮ್ಮತದ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆಯಬೇಕು ಎಂದರು.
ಸಭೆಯಲ್ಲಿ ಡಿಜೆ ಹಾಗೂ ಅಲಂಕೃತ ದೀಪಗಳ ವಿಚಾರವಾಗಿಯೂ ಮಾತಿನ ಚಕಮಕಿ ನಡೆಯಿತು. ಕಳೆದ ಸಾಲಿನ ದಶಮಂಟಪ ಅಲಂಕೃತ ವಾಹನಗಳ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, 47ನೇ ವರ್ಷದ ದಸರಾ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮುಂದಿನ 48ನೇ ವರ್ಷದ ದಸರಾ ಸಮಿತಿಗೆ ಯಾರೇ ಅಧ್ಯಕ್ಷರಾದರೂ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಕಂದದೇವಯ್ಯ ವಂದಿಸಿದರು. ಉಪಾಧ್ಯಕ್ಷ ಶಿವಾಜಿ, ಖಜಾಂಚಿ ದ್ಯಾನ್ ದೇವಯ್ಯ, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ, ಸಂಯೋಜಕ ಚಂದನ್ ಕಾಮತ್ ಸೇರಿದಂತೆ ದಶಮಂಟಪಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.