ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಮಾತೆ ಮರಿಯಮ್ಮ ಜಯಂತ್ಯೋತ್ಸವ
admincoorgdaily

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಾತೆ ಮರಿಯಮ್ಮನವರ ಜಯಂತಿಯನ್ನು ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ೯ ದಿನಗಳಿಂದ ಹಬ್ಬದಾಚಾರಣೆಗೆ ನವೇನದ ಮೂಲಕ ವಿಶೇಷ ಸಿದ್ಧತೆ ಮಾಡಿಕೊಂಡಿದ್ದ ಕ್ರೈಸ್ತರು, ಮಂಗಳವಾರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ನಗರದ ಸಂತ ಮೈಕಲರ ದೇವಾಲಯದಲ್ಲಿ ಬೆಳಿಗ್ಗೆ ಹಬ್ಬದ ಪ್ರಯುಕ್ತ ಆಡಂಬರದ ಗಾಯನ ಬಲಿಪೂಜೆ ನಡೆಯಿತು. ದೇವಾಲಯದ ಧರ್ಮಗುರು ಫಾ. ಪ್ಯಾಟ್ರಿಕ್ ಕ್ಷೇವಿಯರ್ ಬಲಿಪೂಜೆ ಅರ್ಪಿಸಿ, ಭಕ್ತರಿಗೆ ಹಬ್ಬದ ಸಂದೇಶ ನೀಡಿದರು. ಇದೇ ಸಂದರ್ಭ ಭತ್ತದ ಕದಿರುಗಳನ್ನು ಆಶೀರ್ವದಿಸಿ ಭಕ್ತರಿಗೆ ಹಂಚಲಾಯಿತು.
ನಂತರ ಮಾತೆ ಮರಿಯಮ್ಮನವರ ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹೆಜ್ಜೆಹಾಕಿದ ಭಕ್ತರು ತಾವು ತಂದಿದ್ದ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಅರ್ಪಿಸಿದರು.
ಮರಿಯಮ್ಮನವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ಕೋರಲಾಯಿತು. ಭಕ್ತರಿಗೆ ಹೊಸ ಅಕ್ಕಿಯ ಬೋಜನ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಧರ್ಮಗುರುಗಳಾದ ಫಾ. ಜಿತುನ್ ಜೋಸೆಫ್, ಫಾ. ಸಿಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.