ಮಡಿಕೇರಿ ನಗರಸಭೆ ನಿರ್ಧಾರಕ್ಕೆ ಚೇಂಬರ್ ಆಫ್ ಕಾಮರ್ಸ್ ತೀವ್ರ ವಿರೋಧ
admincoorgdaily

ಮಡಿಕೇರಿ ಸೆ.5 : ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಪ್ಲೇಟ್, ಪೇಪರ್ ಕಪ್, ಆಹಾರ ಕಂಟೈನರ್ ಸೇರಿದಂತೆ ವಿವಿಧ ವಸ್ತುಗಳ ಬಳಕೆಗೆ ನಿಷೇಧ ಹೇರಿರುವ ನಗರಸಭೆಯ ನಿರ್ಧಾರಕ್ಕೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಎಂ.ಧನಂಜಯ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದ್ದು, ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅದಕ್ಕೆ ಪೂರಕವಾಗಿ ಮೂಲಸೌಕರ್ಯ ಹಾಗೂ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕಲ್ಪಿಸಬೇಕಾದ ನಗರಸಭೆ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಏಕಾಏಕಿ ವಿವಿಧ ವಸ್ತುಗಳ ಬಳಕೆಯನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಯಾವುದೇ ಊರಿನಲ್ಲಿ ಅಡಿಕೆ ತಟ್ಟೆಗಳ ಬಳಕೆಗೆ ಇಂತಹ ನಿಷೇಧ ಹೇರಿರುವುದು ಕಂಡುಬರುವುದಿಲ್ಲ. ಪರಿಸರ ಸ್ನೇಹಿ ಪರ್ಯಾಯ ವಸ್ತುವಾಗಿರುವ ಅಡಿಕೆ ಹಾಳೆಯಿಂದ ತಯಾರಿಸಲಾದ ತಟ್ಟೆಗಳನ್ನು ನಿಷೇಧಿಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಅನ್ನಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸಮಾರಂಭಗಳು ಹಾಗೂ ಹೋಟೆಲ್‌ಗಳಲ್ಲಿ ಅಡಿಕೆ ತಟ್ಟೆ, ಪೇಪರ್ ಪ್ಲೇಟ್ ಮತ್ತು ಆಹಾರ ಕಂಟೈನರ್‌ಗಳ ಬಳಕೆ ಸಾಮಾನ್ಯವಾಗಿದೆ. ಇವುಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಿದರೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಅನಗತ್ಯ ತೊಂದರೆ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ನೇರವಾಗಿ ಪರಿಣಾಮ ಬೀರುವಂತಹ ನಿರ್ಧಾರ ಕೈಗೊಳ್ಳುವ ಮುನ್ನ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಬೇಕಾಗಿತ್ತು. ಆದರೆ ಯಾವುದೇ ಸಮರ್ಪಕ ಚರ್ಚೆ ನಡೆಸದೆ ಏಕಾಏಕಿ ನಿಷೇಧ ಆದೇಶ ಹೊರಡಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಧನಂಜಯ್ ಹೇಳಿದ್ದಾರೆ.
ಮಡಿಕೇರಿ ನಗರಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ, ವಿಲೇವಾರಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ನಗರಸಭೆ ಸಮರ್ಪಕವಾಗಿ ರೂಪಿಸಬೇಕಾಗಿದೆ. ನಗರದ ಸ್ವಚ್ಛತೆ ಕಾಪಾಡುವುದು ನಗರಸಭೆಯ ಮೂಲ ಕರ್ತವ್ಯವಾಗಿದ್ದು, ಆ ಜವಾಬ್ದಾರಿಯನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಮೇಲೆ ಮಾತ್ರ ಹೊರಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಡಿಕೆ ಹಾಳೆ, ಪೇಪರ್ ಪ್ಲೇಟ್, ಪೇಪರ್ ಗ್ಲಾಸ್ ಹಾಗೂ ಆಹಾರ ಕಂಟೈನರ್‌ಗಳನ್ನು ನಿಷೇಧಿಸುವುದರಿಂದ ಮಾತ್ರ ನಗರದ ತ್ಯಾಜ್ಯ ಸಮಸ್ಯೆ ಪರಿಹಾರವಾಗುವುದಿಲ್ಲ. ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ಸಮರ್ಪಕ ಕಸ ಸಂಗ್ರಹಣೆ, ವೈಜ್ಞಾನಿಕ ವಿಲೇವಾರಿ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಹೆಚ್ಚುವರಿ ಕಸದ ಬುಟ್ಟಿಗಳ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರಸಭೆ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ವ್ಯಾಪಾರಸ್ಥರು, ಹೋಟೆಲ್ ಮಾಲೀಕರು ಹಾಗೂ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕ ಮತ್ತು ಪ್ರಾಯೋಗಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ರೂಪಿಸಬೇಕೆಂದು ಎಂ.ಧನಂಜಯ್ ಆಗ್ರಹಿಸಿದ್ದಾರೆ.