ಆಶಾ ಕಾರ್ಯಕರ್ತೆಯರ ಕುರಿತು ಯು.ಟಿ.ಖಾದರ್ ಹೇಳಿಕೆಗೆ ಚೆಪ್ಪುಡಿರ ರಾಕೇಶ್ ದೇವಯ್ಯ ಖಂಡನೆ
admincoorgdaily

ಮಡಿಕೇರಿ : ಆಶಾ ಕಾರ್ಯಕರ್ತೆಯರ ಕುರಿತು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು “ಆಶಾ ಕಾರ್ಯಕರ್ತರು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ” ಎಂಬ ಸಚಿವರ ಹೇಳಿಕೆ ಆಶಾ ಕಾರ್ಯಕರ್ತೆಯರನ್ನು ಅವಮಾನಿಸುವುದಲ್ಲದೆ, ಅವರ ಸೇವಾ ಮನೋಭಾವ ಹಾಗೂ ಕೆಲಸ ಮಾಡುವ ಉತ್ಸಾಹವನ್ನು ಕುಗ್ಗಿಸುವಂತ್ತಿದೆ ಎಂದು ಟೀಕಿಸಿದ್ದಾರೆ.
ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಳ್ಳುವ ಸಚಿವರುಗಳಿಗೆ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು, ಗರ್ಭಿಣಿಯರು ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡಲು ಆಶಾ ಕಾರ್ಯಕರ್ತೆಯರು ಪಡುವ ಶ್ರಮ ಮತ್ತು ಸೇವೆಯ ಮಹತ್ವ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬವನ್ನು ಮರೆತು, ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹಗಲಿರುಳು ಶ್ರಮಿಸಿದ್ದರು. ಬೆಳಿಗ್ಗೆ, ರಾತ್ರಿ ಎನ್ನದೆ ಮನೆಮನೆಗೆ ತೆರಳಿ ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇಂತಹ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗೌರವ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಮೊದಲು ರೋಗಿಯ ನೆರವಿಗೆ ಧಾವಿಸುವವರು ಆಶಾ ಕಾರ್ಯಕರ್ತೆಯರು.
ಗರ್ಭಿಣಿಯರ ಆರೋಗ್ಯದ ಕಾಳಜಿ, ಮಕ್ಕಳ ಆರೋಗ್ಯ, ಲಸಿಕೆ ಕಾರ್ಯಕ್ರಮಗಳು ಹಾಗೂ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ವಾಸ್ತವವನ್ನು ಸಚಿವರು ಮೊದಲು ಅರಿತುಕೊಳ್ಳಬೇಕು. ಅಧಿಕಾರದ ಅಮಲಿನಲ್ಲಿ ಮನಬಂದಂತೆ ಹೇಳಿಕೆ ನೀಡುವುದನ್ನು ಸಚಿವರು ನಿಲ್ಲಿಸಬೇಕು ಎಂದು ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ ಹಲವು ಜನಪ್ರತಿನಿಧಿಗಳು ತಾವು ಮಾತನಾಡಿದ್ದೇ ಸರಿ ಎಂಬ ಧೋರಣೆಯಿಂದ ವರ್ತಿಸುತ್ತಿದ್ದು, ಜನರ ಭಾವನೆಗಳಿಗೆ ಗೌರವ ನೀಡುತ್ತಿಲ್ಲ. ಸಚಿವರು ಹಾಗೂ ಶಾಸಕರ ಇಂತಹ ವರ್ತನೆಗಳಿಂದ ಜನರು ಬೇಸತ್ತಿದ್ದು, ಆಶಾ ಕಾರ್ಯಕರ್ತೆಯರ ಸೇವೆಯನ್ನು ಅವಮಾನಿಸುವ ಹೇಳಿಕೆಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅವರ ಮನೋಸ್ಥೈರ್ಯ ಕುಗ್ಗಿಸುವ ಹೇಳಿಕೆಗಳನ್ನು ನೀಡದೆ ಅವರ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಗೌರವ ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.