Kodagu

ಚಿಕ್ಕಮಂಡೂರಿನ ಐತಿಹಾಸಿಕ ಗುಧ್ರೋಡೆ ಕೋಲ್ ಮಂದ್ ನಮ್ಮೆಗೆ ದಿನಾಂಕ ಫಿಕ್ಸ್; ನವೆಂಬರ್ 26ಕ್ಕೆ ಅದ್ಧೂರಿ ಆಚರಣೆ

admincoorgdaily

ಚಿಕ್ಕಮಂಡೂರಿನ ಐತಿಹಾಸಿಕ ಗುಧ್ರೋಡೆ ಕೋಲ್ ಮಂದ್ ನಮ್ಮೆಗೆ ದಿನಾಂಕ ಫಿಕ್ಸ್; ನವೆಂಬರ್ 26ಕ್ಕೆ ಅದ್ಧೂರಿ ಆಚರಣೆ
ಪೊನ್ನಂಪೇಟೆ:ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿರುವ ಐತಿಹಾಸಿಕ ಗುಧ್ರೋಡೆ ಕೋಲ್ ಮಂದ್ ನಮ್ಮೆಯನ್ನು ಇದೇ ನವೆಂಬರ್ 26ರಂದು ಆಚರಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಮಂದ್ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮಂದ್ ಸಮಿತಿ ಅಧ್ಯಕ್ಷ ಕೋಳೆರ ನರೇಂದ್ರ ವಹಿಸಿದ್ದರು.

ಸುಮಾರು 70 ವರ್ಷಗಳ ಹಿಂದೆ ಪಾಳುಬಿದ್ದು ಜೀರ್ಣಾವಸ್ಥೆ ತಲುಪಿದ್ದ ಗುಧ್ರೋಡೆ ಕೋಲ್ ಮಂದ್ ಅನ್ನು ಮುಗುಟಗೇರಿ, ನಡಿಕೇರಿ, ಚಿಕ್ಕಮಂಡೂರು ಹಾಗೂ ತೂಚಮಕೇರಿ ಗ್ರಾಮಸ್ಥರು ದಾನಿಗಳ ಸಹಕಾರದೊಂದಿಗೆ 2025ರಲ್ಲಿ ಪುನರ್‌ನಿರ್ಮಿಸಿದ್ದರು. ಬಳಿಕ ಕಳೆದ ವರ್ಷ ಮೊದಲ ಬಾರಿಗೆ ಇಲ್ಲಿ ಪುತ್ತರಿ ಕೋಲ್ ಮಂದ್ ಆಚರಣೆಯನ್ನು ನಡೆಸಲಾಗಿತ್ತು.

ಕೊಡಗಿನ ಸಾಂಪ್ರದಾಯಿಕ ಪದ್ಧತಿಯಂತೆ ಪುತ್ತರಿ ಹಬ್ಬದ ಮರುದಿನ ಕೋಲ್ ಮಂದ್ ಆಚರಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೂ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ನಾಲ್ಕು ಗ್ರಾಮಗಳ ಮುಖಂಡರು ಹಾಗೂ ಪ್ರಮುಖರು ಸಭೆಯಲ್ಲಿ ಚರ್ಚಿಸಿದರು.

ಈ ಸಂದರ್ಭ ಮಾತನಾಡಿದ ಅಂಜಿಕೇರಿ ನಾಡ್ ತಕ್ಕಮುಖ್ಯಸ್ಥ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಪಟ್ಟೋಳೆ ಪಳಮೆಯಲ್ಲಿ ಉಲ್ಲೇಖಿಸಿರುವಂತೆ ಗುಧ್ರೋಡೆ ಮಂದ್ ನಾಲ್ಕು ಗ್ರಾಮಗಳಿಗೆ ಸೇರಿದ ನಾಡ್ ಮಂದ್ ಆಗಿದೆ. ಈ ಐತಿಹಾಸಿಕ ಮಂದ್‌ನ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪುತ್ತರಿ ಹಬ್ಬದ ಬಳಿಕ ಜ್ಯೋತಿಷಿಗಳನ್ನು ಆಹ್ವಾನಿಸಿ ಹೂ ಪ್ರಶ್ನೆ ಮೂಲಕ ಮಂದ್‌ಗೆ ಸಂಬಂಧಿಸಿದ ಐತಿಹಾಸಿಕ ಹಾಗೂ ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳಲು ನಿರ್ಧರಿಸಲಾಯಿತು. ಅಲ್ಲದೆ, ನವೆಂಬರ್ 26ರಂದು ಗುಧ್ರೋಡೆ ಕೋಲ್ ಮಂದ್ ನಮ್ಮೆ ಆಚರಿಸುವುದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅಂಜಿಕೇರಿ ನಾಡಿಗೆ ಸಂಬಂಧಿಸಿದ ಗ್ರಾಮಗಳ ಪುತ್ತರಿ ಹಬ್ಬದ ಕದಿರು ತೆಗೆಯುವ ಸಮಯವನ್ನೂ ನಿಗದಿಪಡಿಸಲಾಗಿದೆ. ನವೆಂಬರ್ 25ರಂದು ಬೆಳಿಗ್ಗೆ 7.30ಕ್ಕೆ ದೇವರ ಕದಿರು ತೆಗೆಯುವುದು, ಬೆಳಿಗ್ಗೆ 10 ಗಂಟೆಗೆ ಊರಿನ ದೇವಸ್ಥಾನಗಳಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಯೊಳಗೆ ಮನೆಗಳಲ್ಲಿ ಕದಿರು ತೆಗೆಯುವಂತೆ ಹುದಿಕೇರಿ ಶ್ರೀ ಮಹಾದೇವರ ದೇವಸ್ಥಾನದಲ್ಲಿ ನಾಡ್ ತಕ್ಕ ಹಾಗೂ ಊರ್ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಮಿತಿ ಖಜಾಂಚಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಲೆಕ್ಕಪತ್ರ ಮಂಡಿಸಿದರು. ನಾಡ್ ತಕ್ಕ ಚೆಕ್ಕೇರ ರಾಜೇಶ್, ಊರ್ ತಕ್ಕರಾದ ಮಲಚೀರ ಬೋಜಪ್ಪ, ಪೆಮ್ಮಂಡ ಅರುಣ, ಕಳ್ಳಿಚಂಡ ನಂದಾ ನಂಜಪ್ಪ ಸೇರಿದಂತೆ ನಾಲ್ಕು ಗ್ರಾಮಗಳ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.