ಶನಿವಾರಸಂತೆಯಲ್ಲಿ ಬಾಲ ಕಾರ್ಮಿಕರ ರಕ್ಷಣೆ
admincoorgdaily

ಸೋಮವಾರಪೇಟೆ:
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಾದ ಹೋಟೆಲ್, ದಿನಸಿ ಅಂಗಡಿ, ಕಸಾಯಿಖಾನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಕುರಿತು ತಪಾಸಣೆ ನಡೆಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಓರ್ವ ಬಾಲಕಾರ್ಮಿಕ ಹಾಗೂ ಓರ್ವ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಸರ್ಕಾರಿ ಬಾಲಮಂದಿರದಲ್ಲಿ ಪುನರ್ವಸತಿಗೊಳಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು.
ತಪಾಸಣೆ ಸಂದರ್ಭದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಹಾಗೂ ತಿದ್ದುಪಡಿ ಕಾಯ್ದೆ, 2016ರ ಕುರಿತು ಅಂಗಡಿ, ವಾಣಿಜ್ಯ ಸಂಸ್ಥೆಗಳು ಹಾಗೂ ತೋಟಗಳ ಮಾಲೀಕರಿಗೆ ಕಾನೂನು ಅರಿವು ಮೂಡಿಸಲಾಯಿತು.
ಕಾಯ್ದೆಯ ಪ್ರಮುಖ ಅಂಶಗಳನ್ನು ಒಳಗೊಂಡ ಬಿತ್ತಿಪತ್ರಗಳನ್ನು ವಿತರಿಸಿ, ಮಾಲೀಕರಿಂದ ಸ್ವಯಂ ಘೋಷಣಾ ಪತ್ರಗಳನ್ನು ಪಡೆಯುವ ಮೂಲಕ ತಮ್ಮ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸುವಂತೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಕಾಯ್ದೆ, 1976, ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಹಾಗೂ ಪೋಕ್ಸೋ ಕಾಯ್ದೆ, 2012ರ ಕುರಿತು ಸಾರ್ವಜನಿಕರು ಮತ್ತು ಮಾಲೀಕರಿಗೆ ಕಾನೂನು ಅರಿವು ನೀಡಲಾಯಿತು.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಬಳಸಿಕೊಳ್ಳಬೇಕಾದ ಸಹಾಯವಾಣಿ ಸಂಖ್ಯೆಗಳಾದ 112 – ತುರ್ತು ಸಹಾಯವಾಣಿ, 1098 – ಮಕ್ಕಳ ಸಹಾಯವಾಣಿ, 181 – ಮಹಿಳಾ ಸಹಾಯವಾಣಿ ಹಾಗೂ 1930 – ಸೈಬರ್ ಅಪರಾಧ ಸಹಾಯವಾಣಿಗಳ ಕುರಿತು ಮಾಹಿತಿ ನೀಡಿ, ಅಗತ್ಯ ಸಂದರ್ಭದಲ್ಲಿ ಸಹಾಯವಾಣಿಗಳನ್ನು ಬಳಸಿಕೊಳ್ಳುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಶಿಧರ್, ಹಿರಿಯ ಕಾರ್ಮಿಕ ನಿರೀಕ್ಷಕರು, ಸೋಮವಾರಪೇಟೆ ವೃತ್ತ, ಶ್ರೀ ಚಂದ್ರು ಎಚ್.ವೈ., ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಶ್ರೀ ಪ್ರವೀಣ್ ಎಚ್.ಎಂ., ಪೊಲೀಸ್ ಕಾನ್ಸ್ಟೇಬಲ್, ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.