ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಸಂತೆ: ಪ್ರಾಯೋಗಿಕ ಕಲಿಕೆಗೆ ಒತ್ತು
admincoorgdaily

ಪೊನ್ನಂಪೇಟೆ, ನ.22: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶನಿವಾರದಂದು ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಇಕೋ ಕ್ಲಬ್ ಹಾಗೂ ಎನ್ಸಿಇಆರ್ಟಿ ಪಠ್ಯಕ್ರಮದ ಕೌಶಲ್ ಬೋಧ್ ಪರಿಕಲ್ಪನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮವು ಮಕ್ಕಳಿಗೆ ಪ್ರಾಯೋಗಿಕ ಕಲಿಕೆಯ ಅನುಭವ ನೀಡಿತು.
ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತರಕಾರಿಗಳು, ಹಣ್ಣುಗಳು, ಕಾಯಿ-ಪಲ್ಯಗಳು ಹಾಗೂ ವಿವಿಧ ತಿಂಡಿ-ತಿನಿಸುಗಳನ್ನು ತಂದು ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಿ ಮಾರಾಟ ಮಾಡಿದರು. ಹಸಿ ತರಕಾರಿಗಳ ಮಹತ್ವವನ್ನು ಅರಿಯುವುದರ ಜೊತೆಗೆ, ಸ್ವತಃ ವ್ಯಾಪಾರ ನಡೆಸುವ ಮೂಲಕ ಲಾಭ-ನಷ್ಟದ ಲೆಕ್ಕಾಚಾರವನ್ನು ತಿಳಿದುಕೊಂಡರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಬಿ. ಎಂ ವಿಜಯ್ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ವ್ಯಾಪಾರದ ಮೂಲಭೂತ ಜ್ಞಾನ ಬೆಳೆಸುವುದು, ಹಣಕಾಸಿನ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರದ ಗಣಿತದ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಕಲಿಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ,
ಈ ಮೂಲಕ ವಿದ್ಯಾರ್ಥಿಗಳಿಗೆ ಸ್ವಯಂ ಕಲಿಕೆ, ತಂಡದ ಸಹಕಾರ, ವ್ಯವಹಾರ ಜ್ಞಾನ ಹಾಗೂ ಸ್ವಾವಲಂಬನೆಯ ಅರಿವನ್ನು ಮೂಡಿಸಲಾಯಿತು ಎಂದು ಹೇಳಿದರು.
ವ್ಯಾಪಾರದಿಂದ ಗಳಿಸಿದ ಹಣವನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ತಂಡಗಳಲ್ಲಿ ಹಂಚಿಕೊಂಡರು. ಈ ಸಂದರ್ಭ ಶಾಲೆಯ ಶಿಕ್ಷಕ ವೃಂದದವರು ಹಾಗೂ ಪೋಷಕರು ಹಾಜರಿದ್ದರು.