Kodagu

ನಗರದ ಮಕ್ಕಳು ರೈತರ ಜಮೀನಿಗೆ (ಹೊಲಕ್ಕೆ) ಭೇಟಿ: "ಗ್ರಾಮಾನುಭವ" ಕಾರ್ಯಕ್ರಮ

admincoorgdaily

ನಗರದ ಮಕ್ಕಳು ರೈತರ ಜಮೀನಿಗೆ (ಹೊಲಕ್ಕೆ) ಭೇಟಿ: "ಗ್ರಾಮಾನುಭವ" ಕಾರ್ಯಕ್ರಮ
ಕುಶಾಲನಗರ:
ನಗರ ಪ್ರದೇಶದ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಮತ್ತು ಕೃಷಿ ಚಟುವಟಿಕೆಗಳ ನೇರ ಅನುಭವ ನೀಡಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಗ್ರಾಮಾನುಭವ" ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಪಿ.ಎಂ.ಶ್ರೀ. ಶಾಲೆಯ  ಮಕ್ಕಳು ತಮ್ಮ ಶಿಕ್ಷಕರೊಂದಿಗೆ ನ.1 ರಂದು( ಭಾನುವಾರ )  ಕುಶಾಲನಗರ ತಾಲ್ಲೂಕಿನ ಹಾರಂಗಿ ನೀರಾವರಿ ಪ್ರದೇಶದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನ ಹೊಸಳ್ಳಿ
ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ರೈತರ ಮನೆಯಂಗಳದಲ್ಲಿ ಕೃಷಿ ಅನುಭವ ಪಡೆದುಕೊಂಡರು.
 ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲಾ ವಿಭಾಗ ಹಾಗೂ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ  8, 9 ಮತ್ತು 11 ನೇ ತರಗತಿಯ ಒಟ್ಟು 50 ಮಕ್ಕಳು ಕೃಷಿ ಕುರಿತು ರೈತರಿಂದ ನೇರ ಅನುಭವ ಪಡೆದರು.
ನ.1 ರಂದು ಮಡಿಕೇರಿಯಲ್ಲಿ ನಡೆದ  ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಂತ್ರಿಯೂ ಆದ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ,   ಮಕ್ಕಳ ಹಳ್ಳಿ ಭೇಟಿಯ 'ಗ್ರಾಮಾನುಭವ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
  ಮಕ್ಕಳ 'ಗ್ರಾಮಾನುಭವ'ವು
ಮಕ್ಕಳು ನೇರವಾಗಿ ಹಳ್ಳಿಗಳಿಗೆ ತೆರಳಿ, ಹಳ್ಳಿಯ ಜೀವನ ಮತ್ತು ಕೃಷಿ ಅರಿವಿನ ಜೊತೆಗೆ ಅನ್ನದಾತನ ಶ್ರಮದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ನಮ್ಮ ಮಕ್ಕಳಿಗೆ ಗ್ರಾಮೀಣ ಸಂಸ್ಕೃತಿಯ ಹೊಸ ಲೋಕವನ್ನೇ ತೆರೆದಿಟ್ಟಿತು.

ಮಕ್ಕಳು ಹಳ್ಳಿಯ ಭೇಟಿಯ ಸಂದರ್ಭದಲ್ಲಿ  ಚಿಕ್ಕನಾಯಕಹಳ್ಳಿ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರ ಕೃಷಿ  ಅನುಭವಗಳು ಮತ್ತು  ಸವಾಲುಗಳನ್ನು ಕೇಳಿ ತಿಳಿದುಕೊಂಡರು.

ತಮ್ಮ ಮನೆಯಂಗಳದಲ್ಲಿ ತಮ್ಮ ಕೃಷಿ ಜೀವನದ ಅನುಭವ ಹಂಚಿಕೊಂಡ ಪ್ರಗತಿಪರ ರೈತ ಟಿ.ಜೆ.ಶೇಷಪ್ಪ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸೂಕ್ತ ಕಾಲದಲ್ಲಿ ವೈಜ್ಞಾನಿಕ ಕ್ರಮದಿಂದ ಕೃಷಿ ಮಾಡಿದರೆ ಖಂಡಿತವಾಗಿಯೂ ಕೃಷಿಯಲ್ಲಿ ಉತ್ತಮ ಲಾಭ ಗಳಿಸಬಹುದು. ಇದರಿಂದ ರೈತರ ಜೀವನಮಟ್ಟ ಸುಧಾರಿಸುವುದರ ಜತೆಗೆ ರಾಷ್ಟ್ರದ ಆಹಾರ ಉತ್ಪಾದನೆಗೆ ತಮ್ಮ ಕೊಡುಗೆ ನೀಡಿದಂತಾಗುತ್ತದೆ ಎಂದರು.
 ನಗರ‌ ಪ್ರದೇಶ ಮಕ್ಕಳಿಗೆ ಹಳ್ಳಿಗೆ ಭೇಟಿ ನೀಡುವ ಗ್ರಾಮಾನುಭವ ಕಾರ್ಯಕ್ರಮವು ಮಕ್ಕಳಲ್ಲಿ ಗ್ರಾಮೀಣ ಜನರ ಕಷ್ಟ-ಸುಖ,  ರೈತರ ಜೀವನ ಕ್ರಮದ ಬಗ್ಗೆ ಪ್ರಾಯೋಗಿಕವಾಗಿ ಹೆಚ್ಚು ಅನುಭವ ಪಡೆಯಲು ಸಾಧ್ಯವಾಗಿದೆ ಎಂದು ಶೇಷಪ್ಪ ಅಭಿಪ್ರಾಯಪಟ್ಟರು.

ಜೇನು ಕೃಷಿ  ಸಮಗ್ರ ಕೃಷಿ ಕುರಿತು ಮಾಹಿತಿ ನೀಡಿದ
ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಶಿವಾನಂದ, 
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ 
ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ 
 ವೈವಿಧ್ಯಮಯ ಬೆಳೆ ತೆಗೆಯುವ ಮೂಲಕ ಕೃಷಿ ಜೀವನದಿಂದ ಹೇಗೆ ಹೆಚ್ಚಿನ ಆದಾಯ ಗಳಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ ಎಂದರು.

       ಪ್ರಕೃತಿಯೊಂದಿಗೆ ರೈತನ ಒಡನಾಟ ಕುರಿತು ಕೃಷಿ ಪಾಠ ಹೇಳಿದ ಯುವ ಕೃಷಿಕರೂ ಆದ ಕೃಷಿ ಮಾರ್ಗದರ್ಶಕ ಟಿ.ಯು.ಪುನೀತ್, 
ಆಹಾರದ ಮೂಲದ ಅರಿವು,
ಕೃಷಿ ಪದ್ಧತಿಗಳ ಪರಿಚಯ, ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಲೆಗಳ ಏರಿಳಿತ, ಎರೆಹುಳು ಗೊಬ್ಬರ ತಯಾರಿಕೆ,
 ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ , ಕೃಷಿಯಲ್ಲಿ ರೋಗಗಳ ಪತ್ತೆ ಮತ್ತು ವೈಜ್ಞಾನಿಕ ಪದ್ಧತಿಯಿಂದ  ತಡೆಗಟ್ಟುವಿಕೆ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.

ರೈತರು ಸಾಂಪ್ರಾದಾಯಿಕ ಕೃಷಿ ಪದ್ಧತಿಯಿಂದ
ವೈಜ್ಞಾನಿಕ ಪದ್ಧತಿಯೆಡೆಗೆ ಸಾಗಿದರೆ ಸ್ವತಃ ರೈತನೇ ಓರ್ವ ವಿಜ್ಞಾನಿಯೂ ಹೌದು ಮತ್ತು ವೈದ್ಯನೂ ಹೌದು. 
ಪ್ರತಿ ಗ್ರಾಮದಲ್ಲೂ ಓರ್ವ ಕೃಷಿ ವಿಜ್ಞಾನಿ ಇದ್ದರೆ ರೈತರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಪುನೀತ್ ತಿಳಿಸಿದರು.

  ಮಕ್ಕಳ 'ಗ್ರಾಮಾನುಭವ'ದ ಮಹತ್ವ ಕುರಿತು ಮಾತನಾಡಿದ
 ಪರಿಸರ ಪ್ರೇಮಿಯೂ ಆದ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, 
ನಗರದ ಮಕ್ಕಳು ಹಳ್ಳಿಗೆ ಮತ್ತು ರೈತರ ಜಮೀನಿಗೆ ಭೇಟಿ ನೀಡುವ 'ಗ್ರಾಮಾನುಭವ' ಕಾರ್ಯಕ್ರಮವು ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕಲಿಯಲಾಗದ ಜೀವನ ಪಾಠಗಳನ್ನು ಮಕ್ಕಳು ಹಳ್ಳಿಯ ಈ ಭೇಟಿ ಮತ್ತು ರೈತರಿಂದ  ಕಲಿಯುತ್ತಾರೆ. ಮಕ್ಕಳಿಗೆ ಗ್ರಾಮೀಣ ಜನರ ಬದುಕಿನ ಅನುಭವದ ಜತೆಗೆ ಪ್ರಕೃತಿಯ ಅರಿವು ಮೂಡಿಸಲು ಮತ್ತು ಅನ್ನದಾತನ ಶ್ರಮವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮವಾದ ಪ್ರಾಯೋಗಿಕ ಕಲಿಕೆಯಾಗಿದೆ ಎಂದರು.

  ಇದಕ್ಕೂ ಮೊದಲು ಹೆಬ್ಬಾಲೆ ಗ್ರಾಮದ ಪ್ರಗತಿಪರ ಕೃಷಿಕರಾದ
ಎಚ್.ಆರ್.ಶಿವಪ್ಪ(ಹುರಕ್ಕಿ ಕುಮಾರ್) ಅವರ ಕೃಷಿ ಜಮೀನಿಗೆ ಭೇಟಿ ನೀಡಿ ಅಡಿಕೆ ತೋಟ ಮತ್ತು ಹೆಬ್ಬಾಲೆಯ ಎಚ್.ಎನ್.ಬಸಪ್ಪ ಅವರ ತೋಟದಲ್ಲಿ ಕೃಷಿಹೊಂಡ ವೀಕ್ಷಿಸಿದ ತಂಡವು  ಹೈನುಗಾರಿಕೆ ಕೃಷಿ ಅನುಭವ ಪಡೆಯಿತು.  ನಂತರ ತೊರೆನೂರು ವಿರಕ್ತ  ಮಠದ ಕೃಷಿ ಜಮೀನಿನಲ್ಲಿ ಬಾಳೆತೋಟ ಕ್ಕೆ ಭೇಟಿ ನೀಡಿ ಬಾಳೆ ಕೃಷಿ ಹಾಗೂ ಮೆಕ್ಕೆಜೋಳ ಕೃಷಿಯ ಬಗ್ಗೆ  ವಿದ್ಯಾರ್ಥಿಗಳು ರೈತರಿಂದ ಮಾಹಿತಿ ಪಡೆದರು.
ಹಳ್ಳಿ ಊಟ ಸವಿದ ಮಕ್ಕಳು: ಇದೇ ವೇಳೆ ಮಧ್ಯಾಹ್ನ ರೈತ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ಮಕ್ಕಳು ಹಳ್ಳಿಯ ಊಟದ ರುಚಿ ಸವಿದು ಖುಷಿಪಟ್ಟರು.

ಈ ಗ್ರಾಮಾನುಭವ ಕಾರ್ಯಕ್ರಮದ ಭೇಟಿ ಸಂದರ್ಭದಲ್ಲಿ  ರೈತರು ಹಾರಂಗಿ ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿರುವ ಕಲ್ಲಂಗಡಿ ತೋಟ, ವಿವಿಧ ಆಹಾರ ಬೆಳೆಗಳು ತೆಂಗು, ಬಾಳೆ, ಭತ್ತ, ರಾಗಿ,ಜೋಳ, ದ್ವಿದಳ ಧಾನ್ಯಗಳು, ತರಕಾರಿ ಸೊಪ್ಪಿನ ಕೃಷಿ , ರೈತರ ಮನೆ ಅಂಗಳದಲ್ಲಿ ಬೆಳೆದಿರುವ ಹೂವಿನ ಹಾಗೂ ಔಷಧೀಯ ಗಿಡಗಳನ್ನು ವೀಕ್ಷಿಸಿ ಅವುಗಳ ಸಂರಕ್ಷಣೆ ಮತ್ತು  ಪೋಷಣೆ ಹಾಗೂ ಅವುಗಳಿಂದ ನಮಗೆ ಸಿಗುವ ಪೌಷ್ಟಿಕಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ರೈತರು ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕರಾದ ಹೆಬ್ಬಾಲೆಯ ಎಚ್.ಎನ್. ಬಸವಣ್ಣ, ಎಚ್.ಆರ್.ಶಿವಪ್ಪ (ಹುರಕ್ಕಿ ಕುಮಾರ್) ಅವರು ಮಕ್ಕಳಿಗೆ ಅಡಿಕೆ ಕೃಷಿ , ಕೃಷಿಹೊಂಡದ ಉಪಯೋಗ ಮತ್ತು ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು.
ಹೆಬ್ಬಾಲೆ ಕ್ಲಸ್ಟರ್ ಸಿಆರ್ ಪಿ ಎಂ.ಕೆ.ದಯಾನಂದ, 'ಗ್ರಾಮಾನುಭವ'ದ ಉದ್ದೇಶ ತಿಳಿಸಿದರು.

ಮಡಿಕೇರಿ ಸರ್ಕಾರಿ ಪಿಯೂ 
ಕಾಲೇಜಿನ‌ ಉಪನ್ಯಾಸಕಿ ಕೆ.ಎನ್. ಪಲ್ಲವಿ, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ವಿ.ಶಶಿಕಲಾ,  ಶಿಕ್ಷಕಿ ಸುಮ, ಪ್ರಾಥಮಿಕ ಶಾಲಾ ವಿಭಾಗದ ಡಿ.ಶೃತಿಶ್ರೀ, ಎಂ.ಎಸ್.ಪ್ರಿಯ ಮತ್ತಿತರ ಶಿಕ್ಷಕಿಯರು ತಮ್ಮ  ವಿದ್ಯಾರ್ಥಿಗಳೊಂದಿಗೆ ಗ್ರಾಮಾನುಭವ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.

 ಪ್ರಗತಿಪರ ರೈತರಾದ ತೊರೆನೂರು ಗ್ರಾಮದ ಟಿ.ಎನ್.ಶಿವಾನಂದ, 
ಟಿ.ಸಿ.ತ್ರಿಣೇಶ್, ಟಿ.ಬಿ.ಬಸಪ್ಪ,
ಮಣಜೂರಿನ
 ಎಂ.ಜಿ.ಕುಮಾರಸ್ವಾಮಿ,
 ಎಂ.ಎನ್.ಶಶಾಂಕ್, ಯಶೋಧ, ಟಿ.ಜೆ.ನಾಗೇಶ್ ( ನಾಗಣ್ಣ),
ಹೆಬ್ಬಾಲೆಯ ಎಚ್.ಎನ್.
ಬಸವಣ್ಣ, ಎಚ್.ಆರ್.ಶಿವಪ್ಪ( ಹುರಕ್ಕಿ ಕುಮಾರ್)
ನಿವೃತ್ತ ಶಿಕ್ಷಕ ಜಿ.ಮೂರ್ತಿ,ಶೇಷಪ್ಪ ಅವರ ಪತ್ನಿ ಎಂ.ಆರ್.ಜ್ಯೋತಿ, ಮಕ್ಕಳಾದ ಕವನ್ ಮತ್ತು ಕಾವ್ಯ ಹಾಗೂ ಗ್ರಾಮಸ್ಥರು ಇದ್ದರು.