National News

ಶಾಲೆಯಲ್ಲಿ 10ನೇ ತರಗತಿ ಬಾಲಕಿ ಮೇಲೆ ಮರ ಕತ್ತರಿಸುವ ಯಂತ್ರದಿಂದ ಕ್ರೂರ ಹಲ್ಲೆ

admincoorgdaily

ಶಾಲೆಯಲ್ಲಿ 10ನೇ ತರಗತಿ ಬಾಲಕಿ ಮೇಲೆ ಮರ ಕತ್ತರಿಸುವ ಯಂತ್ರದಿಂದ ಕ್ರೂರ ಹಲ್ಲೆ
ಆಂಧ್ರಪ್ರದೇಶ;ಶಾಲೆಯಲ್ಲಿ ಮರ ಕತ್ತರಿಸುವ ಯಂತ್ರದಿಂದ ಕ್ರೂರವಾಗಿ ಹಲ್ಲೆಗೊಳಗಾದ 10ನೇ ತರಗತಿ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಬೆಂಗಳೂರಿನ ವೈದ್ಯರು ಬಾಲಕಿಯ ಆರೋಗ್ಯ ಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇತ್ತ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೃತ್ಯ ಎಸಗಿದ ಸಂತ್ರಸ್ತೆಯ ಸಂಬಂಧಿಯಾದ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?: ಶನಿವಾರ ಬೆಳಗ್ಗೆ ಅಮರಾವತಿ ಜಿಲ್ಲೆಯ ರಾಪ್ತಡು ಮಂಡಲದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಮರ ಕತ್ತರಿಸುವ ಯಂತ್ರದೊಂದಿಗೆ ನುಗ್ಗಿದ ಆರೋಪಿ, ನೇರವಾಗಿ ತರಗತಿಗೆ ಪ್ರವೇಶಿಸಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದ. ಆಕೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಸಹಪಾಠಿಗೂ ಗಾಯಗಳಾಗಿದ್ದವು. ತಕ್ಷಣ ಇಬ್ಬರನ್ನೂ ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡ ವಿದ್ಯಾರ್ಥಿನಿಗೆ ಅಲ್ಲಿನ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿತು ಎಂದು ಆಂಧ್ರ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಹೇಳಿದ್ದಾರೆ.

ಗಾಯಗಳ ವಿವರ: ಸಚಿವರು ತಿಳಿಸಿರುವ ಪ್ರಕಾರ ಘಟನೆಯಲ್ಲಿ ವಿದ್ಯಾರ್ಥಿನಿಯ ಬಲಗೈ ಸಂಪೂರ್ಣವಾಗಿ ತುಂಡಾಗಿದೆ. ಕುತ್ತಿಗೆ ಮತ್ತು ಮುಖಕ್ಕೆ ಗಂಭೀರ ಗಾಯ, ತಲೆಗೆ ಗಾಯ ಮತ್ತು ಪಕ್ಕೆಲುಬುಗಳು ಮುರಿದಿದ್ದಲ್ಲದೆ, ರಕ್ತನಾಳಗಳಿಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಬಾಲಕಿಯು ದೇಹದಲ್ಲಿ ರಕ್ತದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ (hypovolemic shock), ನ್ಯುಮೋಥೊರಾಕ್ಸ್ (Collapsed lung), ಮುಖದ ಬಹುಸಂಖ್ಯೆಯ ಮೂಳೆ ಮುರಿತಗಳು, ಎರಡೂ ಹೆಗಲ ಮೂಳೆಗಳಿಗೆ ಗಾಯ, ಸ್ನಾಯುರಜ್ಜು ಗಾಯಗಳು ಮತ್ತು ಕುತ್ತಿಗೆಯ ಬೆನ್ನುಮೂಳೆ ಭಾಗದಲ್ಲಿ ಮೂಳೆ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಬಾಲಕಿಯನ್ನು ಬೆಂಗಳೂರು ಆಸ್ಪತ್ರೆಗೆ ವರ್ಗಾಯಿಸುವ ಮುನ್ನ ತೀವ್ರ ರಕ್ತಸ್ರಾವವನ್ನು ನಿಯಂತ್ರಿಸಲು ವೈದ್ಯರು 10 ಯೂನಿಟ್ ರಕ್ತವನ್ನು ನೀಡಿದ್ದಾರೆ ಎಂದು ಸಚಿವ ಯಾದವ್ ಹೇಳಿದ್ದಾರೆ. ಪೋಷಕರ ಒಪ್ಪಿಗೆ ಪಡೆದ ನಂತರ ರಾಜ್ಯ ಸರ್ಕಾರವು ಬಾಲಕಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದೆ. ಕರ್ನಾಟಕ ಮುಖ್ಯಮಂತ್ರಿ ಕಚೇರಿ ಮತ್ತು ಬೆಂಗಳೂರು ಪೊಲೀಸರು ಹಸಿರು ಕಾರಿಡಾರ್ ಮತ್ತು ಪೊಲೀಸ್ ಬೆಂಗಾವಲು ವ್ಯವಸ್ಥೆ ಮಾಡುವ ಮೂಲಕ ಸಂಚಾರ ಸುಗಮಗೊಳಿಸಲು ಸಹಾಯ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಸಂಜ್ಞೆಯ ಮೂಲಕ ಪ್ರತಿಕ್ರಿಯಿಸಿರುವ ಬಾಲಕಿ: ಬಾಲಕಿಯನ್ನು ಸ್ಥಳಾಂತರಿಸುವ ಮೊದಲು ಆಕೆಯೊಂದಿಗೆ ತಾನು ನಡೆಸಿದ ಸಂವಾದವನ್ನು ನೆನಪಿಸಿಕೊಂಡ ಯಾದವ್, "ಆಕೆಯ ಧೈರ್ಯವನ್ನು ಕಂಡು ತಾನು ಬೆರಗಾದೆ" ಎಂದು ಹೇಳಿದ್ದಾರೆ. ಆಕೆ ಪ್ರಜ್ಞಾಸ್ಥಿತಿಯಲ್ಲಿದ್ದಳು ಮತ್ತು ತನಗೆ ಹೇಗಿದೆ ಎಂದು ಕೇಳಿದಾಗ 'ಥಂಬ್ಸ್-ಅಪ್' (ಹೆಬ್ಬೆರಳನ್ನು ಮೇಲಕ್ಕೆತ್ತಿ) ಸಂಜ್ಞೆಯ ಮೂಲಕ ಪ್ರತಿಕ್ರಿಯಿಸಿದಳು ಎಂದು ಅವರು ತಿಳಿಸಿದ್ದಾರೆ.

ಸ್ನೇಹಿತೆಗೆ 'ಧೈರ್ಯ ಪ್ರಶಸ್ತಿ' ನೀಡಲು PM ಕಚೇರಿಗೆ ಮನವಿ: ತನ್ನ ಸ್ನೇಹಿತೆಯನ್ನು ರಕ್ಷಿಸಲು ಮಧ್ಯಪ್ರವೇಶಿಸಿದ ಮತ್ತೊಬ್ಬ ವಿದ್ಯಾರ್ಥಿನಿಯ ಪಾದದ ಬಳಿ ಗಾಯಗಳಾಗಿವೆ ಮತ್ತು ಮೂಳೆ ಮುರಿತ ಉಂಟಾಗಿದೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿಸಿದ ಆರೋಗ್ಯ ಸಚಿವ ಯಾದವ್, ಆಕೆಯ ಧೈರ್ಯವನ್ನು ಪರಿಗಣಿಸಿ, 'ಧೈರ್ಯ ಪ್ರಶಸ್ತಿ' (Bravery Award) ನೀಡುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ (PMO) ಶಿಫಾರಸು ಮಾಡಿರುವುದಾಗಿ ಹೇಳಿದ್ದಾರೆ.