Kodagu

ತಲಕಾವೇರಿಯಲ್ಲಿ ತಿಂಗಕೋರ್ ಮೊಟ್ಟ್ ಕೊಡವ ಕೂಟದಿಂದ ಸ್ವಚ್ಛತಾ ಸೇವೆ

admincoorgdaily

ತಲಕಾವೇರಿಯಲ್ಲಿ ತಿಂಗಕೋರ್ ಮೊಟ್ಟ್ ಕೊಡವ ಕೂಟದಿಂದ ಸ್ವಚ್ಛತಾ ಸೇವೆ
ಪೊನ್ನಂಪೇಟೆ: ಪವಿತ್ರ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಿಂಗಕೋರ್ ಮೊಟ್ಟ್ ತಲಕಾವೇರಿ ಕೊಡವ ಕೂಟದ ವತಿಯಿಂದ ತಲಕಾವೇರಿಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಅಕ್ಟೋಬರ್ 17ರಂದು ನಡೆಯಲಿರುವ ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ಕೊಡವ ಕೂಟದ ಸುಮಾರು 400ಕ್ಕೂ ಅಧಿಕ ಕಾರ್ಯಕರ್ತರು ತಲಕಾವೇರಿಗೆ ಆಗಮಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ತಲಕಾವೇರಿಯ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ತಿಂಗಕೋರ್ ಮೊಟ್ಟ್ ಕೊಡವ ಕೂಟದ ವತಿಯಿಂದ ಪ್ರತಿ ತಿಂಗಳು ತಲಕಾವೇರಿಗೆ ಭೇಟಿ ನೀಡಿ ತಾಯಿ ಕಾವೇರಮ್ಮನ ದರ್ಶನ ಪಡೆದು, ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ.

ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕಾರ್ಯಕರ್ತರ ಅನುಕೂಲಕ್ಕಾಗಿ ಐದು ಖಾಸಗಿ ಶಾಲೆಗಳ ಬಸ್‌ಗಳ  ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಧಾರ್ಮಿಕ ಕ್ಷೇತ್ರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕೂಟದ ವತಿಯಿಂದ ನಡೆಸಲಾಗುತ್ತಿರುವ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭ ಮಣವಟ್ಟೀರ, ಮಂಡೀರ, ಪಟ್ಟಮಾಡ ಕುಟುಂಬಸ್ಥರು,  ಕೂಟದ ಪ್ರಮುಖರಾದ  ಕೊಡವ ಎಳ್ತ್ ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಚಂಗುಲಂಡ ಅಯ್ಯಪ್ಪ, ಅಣ್ಣೀರ ಹರೀಶ್ ಮಾದಪ್ಪ,ನೂರೇರ ಜೀವನ್ ಹಾಗೂ ಕೊಡಗು ಮತ್ತು ಮೈಸೂರು ಜಿಲ್ಲೆಯ ನಾನಾ ಭಾಗಗಳಿಂದ ಕಾರ್ಯಕರ್ತರು ಹಾಜರಿದ್ದರು.