Kodagu

ಅ. 23 ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ

admincoorgdaily

ಅ. 23 ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ
ವಿರಾಜಪೇಟೆ;ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ, ಪಾಲಿಬೆಟ್ಟ ಗ್ರಾಮ ಪಂಚಾಯತ್, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕ,  ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕ 23 ರ ಶುಕ್ರವಾರದಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಶಶಿ ಅಚ್ಚಪ್ಪ ಅವರು ಮಾಹಿತಿಯನ್ನು ನೀಡಿದರು.

ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷವೂ ಸಹ ನಾವು ನಮ್ಮ ಸಮಿತಿ ವತಿಯಿಂದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾಕುಟ್ಟದಲ್ಲಿ ಸ್ವಚ್ಛತಾ ಅಭಿಯಾನ ಜಾಥಾ ಕಾರ್ಯಕ್ರಮವನ್ನು  ಆಯೋಜಿಸಿದ್ದೆವು. ಆ ಕಾರ್ಯಕ್ರಮವು ಯಶಸ್ವಿಯನ್ನು ಕಂಡಿತು. ಇದೀಗ ನಾಡಿದ್ದು ಅಕ್ಟೋಬರ್ 23ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಎರಡು ಪದವಿ ಕಾಲೇಜುಗಳ ನೂರಕ್ಕೂ ಅಧಿಕ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. 

ಜತೆಗೆ ವಿವಿಧ ಸಂಘ ಸಂಸ್ಥೆಗಳು ಸಹ ಜತೆಗೂಡಲಿವೆ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ 150 ಕ್ಕೂ ಅಧಿಕ ಜನರು  ಸೇರಲಿದ್ದಾರೆ ಎಂದರು. ಪಾಲಿಬೆಟ್ಟ ಗ್ರಾಮ ಪಂಚಾಯತಿಯು ಸಹ ಸಂಪೂರ್ಣ ಸಹಕಾರ ನೀಡಿದ್ದು ಸ್ವಚ್ಛತಾ ಅಭಿಯಾನದಂದು ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಅಭಿಯಾನಕ್ಕೆ ಚಾಲನೆಯನ್ನು ನೀಡಲಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವು ಜರುಗಲಿದ್ದು ಇದರ ಜೊತೆಗೆ ಸ್ವಚ್ಛ ಪರಿಸರ ಮಾಹಿತಿ ಕಾರ್ಯಕ್ರಮ, ಗಿಡ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು. ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪುರಸಭಾ ಸದಸ್ಯರಾದ ಸುನಿತಾ ಅವರು ಮಾತನಾಡಿ ಪಾಲಿ ಬೆಟ್ಟದಲ್ಲಿ ಜರುಗಲಿರುವ ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 

ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಸಹ ಸಹಕಾರವನ್ನು ನೀಡಿದ್ದು ಕಾರ್ಯಕ್ರಮಕ್ಕೆ ಸಹಭಾಗಿತ್ವವನ್ನು ನೀಡಲಿವೆ. ಇದೊಂದು ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸರ್ವರು ಕೈಜೋಡಿಸೋಣ ಎಂದು ಕರೆ ಕೊಟ್ಟರು. ಪತ್ರಿಕಾಗೋಷ್ಠಿಯಲ್ಲಿ ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಸುಬ್ರಮಣಿ ಹಾಗೂ ಥೆರೇಸಾ ವಿಕ್ಟರ್ ಉಪಸ್ಥಿತರಿದ್ದರು.