ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರಿಡಲು ಸಿಎನ್ ಸಿ ಒತ್ತಾಯ
admincoorgdaily

ಮಡಿಕೇರಿ, ಸೆ.17: ಕೊಡಗು ವಿಶ್ವವಿದ್ಯಾಲಯಕ್ಕೆ ಭಾರತದ ಮೊದಲ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನೇ ನಾಮಕರಣ ಮಾಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ (CNC) ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಅವರಿಗೆ CNC ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಅವರು ಮನವಿ ಸಲ್ಲಿಸಿದ್ದಾರೆ.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಎಸ್. ಆಲೂರ್ ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನೂ ಒಳಗೊಂಡಂತೆ ಮೂರು ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆಂದು ತಿಳಿದುಬಂದಿದೆ. ಆದರೆ, ಎಲ್ಲ ಕಾಲಕ್ಕೂ ಅತ್ಯಂತ ಅರ್ಹ, ಯೋಗ್ಯ ಹಾಗೂ ಸ್ಫೂರ್ತಿದಾಯಕ ಹೆಸರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಮಿಲಿಟರಿ ಕ್ಷೇತ್ರದ ಅಪ್ರತಿಮ ಪ್ರತಿಭೆ ಹಾಗೂ ಕೊಡಗಿನ ಹೆಮ್ಮೆಯ ಪುತ್ರರಾಗಿದ್ದು, ದೇಶಕ್ಕೆ ನೀಡಿದ ಸೇವೆಗಾಗಿ ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವುದು ಸೂಕ್ತ ಗೌರವವಾಗಲಿದೆ ಎಂದು ಹೇಳಿದ್ದಾರೆ.
ಜನರಲ್ ವಿ.ಕೆ. ಸಿಂಗ್ ಅವರ Courage & Conviction ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ವಿಶ್ವದ ನಾಲ್ವರು ಅತ್ಯುತ್ತಮ ಭಾರತೀಯ ಮಿಲಿಟರಿ ಐಕಾನ್‌ಗಳಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಹಾಗೂ ಲೆಫ್ಟಿನೆಂಟ್ ಜನರಲ್ ಸಗತ್ ಸಿಂಗ್ ಅವರ ಹೆಸರುಗಳಿವೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊಡಗು ವಿಶ್ವವಿದ್ಯಾಲಯಕ್ಕೆ “ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿಶ್ವವಿದ್ಯಾಲಯ” ಎಂದು ನಾಮಕರಣ ಮಾಡುವ ಮೂಲಕ ದೇಶಭಕ್ತ ದಂತಕಥೆಯಾದ ಕಾರ್ಯಪ್ಪ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕರ್ನಾಟಕ ಸರ್ಕಾರವನ್ನು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.