ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ
admincoorgdaily

ಮಡಿಕೇರಿ ಸೆ.21 : ತುಳು ಮತ್ತು ಕೊಂಕಣಿ ಭಾಷೆಗಳಂತೆಯೇ ಕೊಡವರ ಮಾತೃಭಾಷೆಯಾದ ಕೊಡವ ಭಾಷೆಗೂ ರಾಜ್ಯ ಭಾಷೆಯ ಮಾನ್ಯತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸರಕಾರವನ್ನು ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮನವಿ ಸಲ್ಲಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡಿರುವುದನ್ನು ಸಿಎನ್‌ಸಿ ಸ್ವಾಗತಿಸುತ್ತದೆ. 1956ರ ರಾಜ್ಯ ಪುನರ್ ರಚನೆ ಕಾಯ್ದೆಯ 7ನೇ ತಿದ್ದುಪಡಿಯ ಆಶಯ ಹಾಗೂ ಸಂವಿಧಾನದ ವಿಧಿ 345, 347 ಮತ್ತು 348ರ ಅಡಿಯಲ್ಲಿ ಕೊಡವ ಭಾಷೆಗೂ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕೊಡವ ಭಾಷೆ ಜೀವಂತ, ಸಮೃದ್ಧ ಹಾಗೂ ಪ್ರಾಚೀನ ಭಾಷೆಯಾಗಿದ್ದು, ಭಾಷಾ ತಜ್ಞ ಡಾ.ಪಂಡಿತ್ ಸೀತಾಕಾಂತ್ ಮಹಾಪಾತ್ರ ಅವರು ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು. ಅಲ್ಲದೆ, ಬಿ.ಕೆ.ಹರಿಪ್ರಸಾದ್ ಅವರು 2016-17ರಲ್ಲಿ ಸಂಸತ್ತಿನಲ್ಲಿ ಕೊಡವ ಮತ್ತು ತುಳು ಭಾಷೆಗಳನ್ನು 8ನೇ ಶೆಡ್ಯೂಲ್ ಗೆ ಸೇರಿಸುವ ಕುರಿತು ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಿದ್ದರು.
2002ರಲ್ಲಿ ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರದ ರಾಜ್ಯ ಪುನರ್ ರಚನೆ ಕಾಯ್ದೆ 1956ರ ಅನ್ವಯ ಕೊಡವ ಭಾಷೆಯನ್ನು ಆಡಳಿತಾಂಗದಲ್ಲಿ ಪರಿಗಣಿಸುವ ಕುರಿತು ಆದೇಶ ಹೊರಡಿಸಿತ್ತು. ಆದರೆ ನಂತರ ಆ ಆದೇಶವನ್ನು ಹಿಂಪಡೆಯಲಾಗಿದ್ದು, ಅದಕ್ಕೆ ಕಾರಣವೇನು ಎಂಬುವುದು ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಎನ್.ಯು.ನಾಚಪ್ಪ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2008ರಲ್ಲಿ ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಆಯುಕ್ತರ ಕಚೇರಿವರೆಗೆ ರ‍್ಯಾಲಿ ನಡೆಸಿದ್ದಲ್ಲದೆ, ಕೊಡವ ಭಾಷೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಹಲವು ಸತ್ಯಾಗ್ರಹ ಹಾಗೂ ವಿಚಾರ ಸಂಕಿರಣಗಳನ್ನು ಸಿಎನ್‌ಸಿ ನಡೆಸಿದೆ. 1956ರ ನ.1ರಂದು ಕೊಂಕಣಿ, ತುಳು ಹಾಗೂ ಕೊಡವ ಭಾಷಾ ಪ್ರದೇಶಗಳು ವಿಶಾಲ ಕರ್ನಾಟಕದ ಭಾಗವಾದವು. ರಾಜ್ಯದಲ್ಲಿ ಕೊಂಕಣಿ ಹಾಗೂ ತುಳು ಭಾಷೆಗಳಿಗೆ ದೊರೆತಿರುವ ಮಾನ್ಯತೆಯ ಹಿನ್ನೆಲೆಯಲ್ಲಿ ಕೊಡವ ಭಾಷೆಯನ್ನು ನಿರ್ಲಕ್ಷಿಸದೆ ಸಮಾನವಾಗಿ ಪರಿಗಣಿಸಿ ರಾಜ್ಯ ಭಾಷೆಯ ಮಾನ್ಯತೆಯನ್ನು ನೀಡಬೇಕು.
ಕೊಡವ ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡುವ ಮೂಲಕ ಕೊಡವರ ದೀರ್ಘಕಾಲದ ಸಂವಿಧಾನಾತ್ಮಕ ಹಾಗೂ ಆಡಳಿತಾತ್ಮಕ ಹಕ್ಕಿನ ಬೇಡಿಕೆಯನ್ನು ಈಡೇರಿಸಿ, ರಾಜ್ಯದ ವೈವಿಧ್ಯಮಯ ಭಾಷಾ-ಸಾಂಸ್ಕೃತಿಕ ಸ್ವರೂಪವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿಯ ಪ್ರತಿಗಳನ್ನು ರಾಷ್ಟçಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೂ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.