ಕೊಡವಲ್ಯಾಂಡ್ ಸ್ವಾಯತ್ತತೆ, ಕೊಡಗಿಗೆ ಯುಟಿ ಸ್ಥಾನಮಾನಕ್ಕೆ ಆಗ್ರಹಿಸಿ ಸಿಎನ್ಸಿ ಸತ್ಯಾಗ್ರಹ
admincoorgdaily

ಮಡಿಕೇರಿ ನ.1: ಕೊಡವಲ್ಯಾಂಡ್ ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ (ಯುಟಿ) ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾನುವಾರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು.
ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು 1956ರ ರಾಜ್ಯ ಪುನರ್ ವಿಂಗಡಣೆಯಿಂದಾಗಿ ಕೊಡಗು ತನ್ನ ಪ್ರತ್ಯೇಕ ಪಾರ್ಟ್-ಸಿ ರಾಜ್ಯದ ಸ್ಥಾನಮಾನವನ್ನು ಕಳೆದುಕೊಂಡು ವಿಶಾಲ ಮೈಸೂರು ರಾಜ್ಯದಲ್ಲಿ ವಿಲೀನಗೊಂಡಿರುವುದು ಕೊಡವ ಸಮುದಾಯಕ್ಕೆ ಐತಿಹಾಸಿಕ ಅನ್ಯಾಯವಾಗಿದೆ. ರಾಜ್ಯ ಪುನರ್ ವಿಂಗಡಣೆ ಸಂದರ್ಭ ನೀಡಲಾಗಿದ್ದ ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿದರು.
ಕೊಡಗಿನ ಐತಿಹಾಸಿಕ ಅಸ್ಮಿತೆ, ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ, ಭಾಷೆ, ಭೂಮಿ ಹಾಗೂ ಸಾಂಪ್ರದಾಯಿಕ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಮರುಸ್ಥಾಪಿಸಬೇಕು. ಕೊಡವಲ್ಯಾಂಡ್ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ 2, 3, 4, 244 ಹಾಗೂ 371ನೇ ವಿಧಿಗಳು ಮತ್ತು ಐದನೇ ಹಾಗೂ ಆರನೇ ಅನುಸೂಚಿಗಳ ಅಡಿಯಲ್ಲಿ ಕೊಡವ ಸಮುದಾಯಕ್ಕೆ ವಿಶೇಷ ಸಾಂವಿಧಾನಿಕ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಕೊಡವರಿಗೆ ಪ್ರತ್ಯೇಕ ಜನಾಂಗೀಯ ಗುರುತಿನ ಮಾನ್ಯತೆ, ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ, ಕೊಡವ ಭಾಷೆಗೆ ಮಾನ್ಯತೆ, ಪೂರ್ವಜರ ಭೂಮಿಗೆ ರಕ್ಷಣೆ, ಕೊಡವ ಸ್ವಾಯತ್ತ ಮಂಡಳಿ ಹಾಗೂ ಸಾಂಪ್ರದಾಯಿಕ ಕಾನೂನು ಮಂಡಳಿ ಸ್ಥಾಪನೆ ಸೇರಿದಂತೆ ಹತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದು ನಾಚಪ್ಪ ತಿಳಿಸಿದರು.
ಕೊಡವರ ಪವಿತ್ರ ಮಂದ್, ದೇವಕಾಡು, ಕೈಮಾಡ, ಯುದ್ಧ ಸ್ಮಾರಕಗಳು ಹಾಗೂ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಸಾಂವಿಧಾನಿಕ ಭದ್ರತೆ ಅಗತ್ಯವಿದೆ. ಕೊಡವ ಸಂಸ್ಕೃತಿ ಮತ್ತು ಪರಂಪರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯಬೇಕು.
ತೋಕ್-ಗನ್ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 36 ವರ್ಷಗಳಿಂದ ಕೊಡವ ಸಮುದಾಯದ ಅಸ್ತಿತ್ವ, ಹಕ್ಕುಗಳು ಹಾಗೂ ಸ್ವಯಂ ಆಡಳಿತದ ಬೇಡಿಕೆಗಳಿಗಾಗಿ ಸಿಎನ್ಸಿ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದೆ. ಈ ಹಿಂದೆ ದೆಹಲಿಯಲ್ಲಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ಈ ಬಾರಿ ಕೊಡವಲ್ಯಾಂಡ್ ನಲ್ಲಿಯೇ ಹಮ್ಮಿಕೊಳ್ಳಲಾಗಿದೆ ಎಂದು ನಾಚಪ್ಪ ತಿಳಿಸಿದರು.
ಸತ್ಯಾಗ್ರಹದ ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಜ್ಞಾಪನಾ ಪತ್ರವನ್ನು ಜಿಲ್ಲಾಡಳಿತದ ಮೂಲಕ ಭಾರತ ಸರಕಾರಕ್ಕೆ ಸಲ್ಲಿಸಲಾಯಿತು.
ಸತ್ಯಾಗ್ರಹದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ, ನಂದೇಟಿರ ರವಿ ಸುಬ್ಬಯ್ಯ, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಚಂಬಂಡ ಜನತ್ ಕುಮಾರ್, ಪುದಿಯೊಕ್ಕಡ ಪೃಥ್ವಿ ಬೋಪಣ್ಣ, ನಂದಿನೆರವAಡ ವಿಜು, ಕೂಪದಿರ ಸಾಬು ತಮ್ಮಯ್ಯ, ಪಾಲೆಕಂಡ ಪ್ರಧಾನ ಪೂಣಚ್ಚ, ಐತಿಚಂಡ ಪೂವಣ್ಣ, ಬಡುವಂಡ ವಿಜಯ, ಚೊಕ್ಕಂಡ ಕಟ್ಟಿ, ಅವರೆಮಾದಂಡ ಚಂಗಪ್ಪ ಹಾಗೂ ಉಕ್ಕೇರಿಯಂಡ ಚಿಣ್ಣಪ್ಪ ಪಾಲ್ಗೊಂಡಿದ್ದರು.