ಕಾಫಿ ದಸರಾ; ಕಾಫಿ ಕೃಷಿಗೆ ಹೆಚ್ಚಿನ ಉತ್ತೇಜನ, ಡಾ.ಮಂತರ್ ಗೌಡ
admincoorgdaily


ಮಡಿಕೇರಿ:-ಕಾಫಿ ಬೆಳೆಗಾರರು ಜಿಲ್ಲೆ ಆರ್ಥಿಕತೆಯ ಬೆನ್ನೆಲುಬು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ಮೈದಾನದ ‘ದೊಡ್ಡಮನೆ ಸಾಕಮ್ಮ ವೇದಿಕೆ’ಯಲ್ಲಿ ಬುಧವಾರ ನಡೆದ ಕಾಫಿ ದಸರಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಫಿ ಬೆಳೆಗಾರರನ್ನು ಒಂಡೆಡೆ ಸೇರಲು 3ನೇ ಕಾಫಿ ದಸರಾ ಆಯೋಜಿಸಲಾಗಿದ್ದು, ಇದೊಂದು ಪ್ರಯತ್ನವಾಗಿದೆ. ಕಾಫಿಯಲ್ಲಿ ಕೇಕ್, ಚಾಕೋಲೆಟ್ ಸೇರಿದಂತೆ ಹಲವು ಬಗೆಯ ತಿನಿಸು ತಯಾರಿಸಬಹುದಾಗಿದ್ದು, ಕಾಫಿಯನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು
ಅವರು ಸಲಹೆ ಮಾಡಿದರು.
‘ಹಿರಿಯರು ಭೂಮಿಯ ಆಸ್ತಿ ಉಳಿಸಿಕೊಂಡು ಬಂದಿದ್ದು, ಅದನ್ನು ಸಂರಕ್ಷಿಸಬೇಕು. ವೈದ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಸಹ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ.ಮಂತರ್ ಗೌಡ ಅವರು ಕರೆ ನೀಡಿದರು.’
ಸಂಕಷ್ಟದ ಸಂದರ್ಭದಲ್ಲಿ ಕಾಫಿ ಕೃಷಿಯು ಕಾಫಿ ಕಾರ್ಮಿಕರನ್ನು ಕೈಹಿಡಿದಿದೆ ಎಂಬುದನ್ನು ಮರೆಯಬಾರದು. ಕಾಫಿ ಬೆಳೆಗಾರರು ಗುಣಮಟ್ಟದ ಕಾಫಿ ಬೆಳೆದು ದೇಶ-ವಿದೇಶಗಳಲ್ಲಿ ಪಸಪರಿಸುವಂತಾಗಬೇಕು. ಕಾಫಿ ಬೆಳೆ ಅಭಿವೃದ್ಧಿ ಸಂಬಂಧಿಸಿದಂತೆ ಕಾಫಿ ದಸರಾ ಸಹಕಾರಿಯಾಗಿದೆ ಎಂದು ಶಾಸಕರು ಹೇಳಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಎಂ.ಜೆ. ಅವರು ಮಾತನಾಡಿ, ಕೇಂದ್ರ ಸರ್ಕಾರ ಕಾಫಿ ಬೆಳೆಗೆ ವಿಮೆ ನೀಡಲು ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರವೂ ಸಹ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ನೀಡುತ್ತಿದೆ. ಆ ದಿಸೆಯಲ್ಲಿ ಕಾಫಿ ಬೆಳೆಗೂ ಬೆಳೆ ವಿಮೆ ನೀಡುವಂತಾಗಬೇಕು ಎಂದು ಅವರು ಕೋರಿದರು.
ಕೂರ್ಗ್ ಎಂದರೆ ಒಂದು ರೀತಿ ಬ್ರ್ಯಾಂಡ್ ಇದ್ದಂತೆ, ಕಾಫಿ, ಜೇನು, ಕಿತ್ತಳೆ, ಏಲಕ್ಕಿ, ಕರಿ ಮೆಣಸು, ಕ್ರೀಡೆ, ಸೇನೆ, ಸಿನಿಮಾ ಹೀಗೆ ಒಂದು ರೀತಿಯ ಬ್ರ್ಯಾಂಡ್ ಇದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ದಿನೇಶ್ ಅವರು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಕೂರ್ಗ್ ಎಂಬ ಬ್ರ್ಯಾಂಡ್ ಕಡಿಮೆ ಆಗುತ್ತಿರುವ ಭಾವನೆ ಕಂಡು ಬರುತ್ತಿದೆ. ಆದ್ದರಿಂದ ಪೂರ್ವಿಕರು ಕಟ್ಟಿ ಬೆಳೆಸಿದ ಬ್ರ್ಯಾಂಡ್ ಅನ್ನು ಉಳಿಸಿಕೊಂಡು ಹೋಗಬೇಕು ಎಂದು ಎಂ.ಜೆ.ದಿನೇಶ್ ಅವರು ಕರೆ ನೀಡಿದರು.
ಕಾಫಿ ದರ ಯಾವಾಗಲು ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ಕಾಫಿ ಬೆಳೆಯ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಕಾಫಿ ಉತ್ಪನ್ನ ಹೆಚ್ಚಿಸಬೇಕು. 2047 ರ ವೇಳೆಗೆ 7 ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ಎಂ.ಜೆ.ದಿನೇಶ್ ಅವರು ವಿವರಿಸಿದರು.
ವಿಶ್ವದ ಬ್ರೆಜಿಲ್ ದೇಶದಲ್ಲಿ ಶೇ.75 ರಷ್ಟು ಹಾಗೂ ವಿಯೆಟ್ನಂ ದೇಶದಲ್ಲಿ ಕಾಫಿ ಬೆಳೆ ಉತ್ಪಾದನೆ ಹೆಚ್ಚಾಗಿದೆ. ಆದ್ದರಿಂದ ಕಾಫಿ ಬೆಳೆಗೆ ಹೆಚ್ಚಿನ ದರ ಪಡೆಯಲು, ಉತ್ತಮ ಗುಣಮಟ್ಟದ ಕಾಫಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಕಾಫಿ ಮಂಡಳಿಯು ಕಾಫಿ ಉತ್ತೇಜನಕ್ಕೆ ನೀಡುತ್ತಿರುವ ಕಾರ್ಯಚಟುವಟಿಕೆ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು. ಅಮೂಲ್, ಮ್ಯೂಚಿಯಲ್ ಫಂಡ್, ಮೊಟ್ಟೆ ಉತ್ಪಾದನೆ ಮತ್ತಿತರ ಬ್ರ್ಯಾಂಡ್ಗಳು ತಮ್ಮದೇ ಆದ ರೀತಿ ದೇಶದಲ್ಲಿ ಹೆಸರು ಮಾಡಿದ್ದು, ಅದೇ ರೀತಿ ಕಾಫಿ ಬೆಳೆಯಲ್ಲೂ ಸಹ ಹೆಸರು ಗಳಿಸುವಂತಾಗಬೇಕು ಎಂದು ಎಂ.ಜೆ.ದಿನೇಶ್ ಅವರು ನುಡಿದರು.
ಸದ್ಯ ಈಗ 70 ಗ್ರಾಂ ನಷ್ಟು ಕಾಫಿ ಸವಿಯುತ್ತಿದ್ದಾರೆ. 2047ರ ವೇಳೆಗೆ 150 ಗ್ರಾಂ ಕಾಫಿ ಸವಿಯುವಂತಾಗಬೇಕು. ಆ ನಿಟ್ಟಿನಲ್ಲಿ ಕಾಫಿ ಉತ್ಪಾದನೆಗೆ ಮತ್ತಷ್ಟು ಒತ್ತು ನೀಡಬೇಕು. ಭವಿಷ್ಯದಲ್ಲಿ ಕಾಫಿ ಬೆಳೆಗೆ ಹೆಚ್ಚಿನ ಅವಕಾಶಗಳು ಬರಲಿದೆ ಎಂದು ಕಾಫಿ ಮಂಡಳಿಯ ಅಧ್ಯಕ್ಷರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕಾಫಿ ಉತ್ಪಾದನೆ ಜೊತೆಗೆ ಮಾರುಕಟ್ಟೆ ಸೌಲಭ್ಯ ಹೆಚ್ಚಾಗಬೇಕು ಎಂದು ಅವರು ಹೇಳಿದರು.
ಕಾಫಿ ಬೆಳೆಗಾರರು ಕಾಫಿ ಉತ್ಪಾದಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಫಿ ಗಿಡಕ್ಕೆ ಗೊಬ್ಬರ, ಕಸ ತೆಗೆಯುವುದು ಸೇರಿದಂತೆ ಅದನ್ನು ನೋಡಿಕೊಳ್ಳಲು ಖರ್ಚು ವೆಚ್ಚ ಹೆಚ್ಚಾಗಿದೆ. ಆದ್ದರಿಂದ ಉತ್ಪಾದನೆಯ ಜೊತೆಗೆ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಬೇಕು ಎಂದು ಸುಜಾ ಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ಮಾತನಾಡಿ, ಕಾಫಿ ಬೆಳೆಗಾರರ ಸಂಕಷ್ಟವನ್ನು ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವು ಸಹ ಕೈ ಜೋಡಿಸಿ ಅಗತ್ಯ ಆರ್ಥಿಕ ಸಹಕಾರ ನೀಡಬೇಕು ಎಂದು ಕೋರಿದರು.
ಈ ಬಾರಿ ಮಳೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ ಬೆಳೆಯ ಸಂರಕ್ಷಣೆ ಹೇಗೆ ಎಂಬ ಬಗ್ಗೆ ಯೋಚಿಸಬೇಕಿದೆ ಎಂದರು.
ಕಾಫಿ ಮಂಡಳಿಯ ಸಿಇಒ ಕುರ್ಮಾರಾವ್ ಅವರು ಮಾತನಾಡಿ, ಕಾಫಿ ಉತ್ಪಾದನೆಯಲ್ಲಿ ಕೊಡಗು ಮುಂಚೂಣಿಯಲ್ಲಿದೆ. ಸಣ್ಣ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಸರ್ಕಾರದಿಂದ ಅಗತ್ಯ ಸಹಕಾರ ನೀಡಲು ಪ್ರಯತ್ನಿಸಲಾಗಿದೆ ಎಂದರು.
ಕಾಫಿ ಗುಣಮಟ್ಟ ಇದ್ದಲ್ಲಿ ಉತ್ತಮ ದರ ದೊರೆಯಲಿದೆ. ಆ ನಿಟ್ಟಿನಲ್ಲಿ ಗುಣಮಟ್ಟದ ಕಾಫಿ ಉತ್ಪಾದನೆಗೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಕಾಫಿ ಮಂಡಳಿ ವತಿಯಿಂದ ಕಾಫಿ ಬೆಳೆ ಕುರಿತು ಪದವಿ ಮತ್ತು ಸ್ನಾತಕೋತ್ತರ ಪದವಿ ಡಿಪ್ಲೋಮೊ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಕುರ್ಮಾರಾವ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಪ್ಲಾಂಟರ್ ಅಸೋಶಿಯೇಷನ್ನ ಅಧ್ಯಕ್ಷರಾದ ಮಾತಂಡ ಕಾರ್ಯಪ್ಪ ಅವರು ಮಾತನಾಡಿ, ‘ಒಂದು ಜಿಲ್ಲೆ ಒಂದು ಉತ್ಪಾದನೆ’ ಕಾಫಿ ಬೆಳೆ ಬರಲಿದ್ದು, ಕಾಫಿ ಬೆಳೆಗಾರರ ಸಂಕಷ್ಟವನ್ನು ತಿಳಿದುಕೊಂಡು ಅಗತ್ಯ ಸಹಕಾರ ನೀಡಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಕಾಫಿ ಮಂಡಳಿ ನಿರ್ದೇಶಕರಾದ ತಳೂರು ಕಿಶೋರ್ ಕುಮಾರ್, ಕೂರ್ಗ್ ಪ್ಲಾಂಟರ್ ಅಸೋಶಿಯೇಷನ್ನ ಪವನ್ ಮೊಣ್ಣಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ, ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ದಿವ್ಯ ಮಂತರ್ ಗೌಡ, ಕಾಫಿ ಮಂಡಳಿಯ ಉಪ ನಿರ್ದೇಶಕರಾದ ವೆಂಕಟ್ ರೆಡ್ಡಿ, ಚಂದ್ರಶೇಖರ್ ಇತರರಿದ್ದರು.
ಕಾಫಿ ದಸರಾ ಸಂಚಾಲಕರಾದ ಅನಿಲ್ ಎಚ್.ಟಿ. ಸ್ವಾಗತಿಸಿದರು, ವಿನೋದ್ ಮೂಡಗದ್ದೆ ನಿರೂಪಿಸಿದರು. ರೇವತಿ ರಮೇಶ್, ಪ್ರೇಮ ರಾಘವಯ್ಯ, ಭಾರತಿ ಮತ್ತು ತಂಡದವರು ಒಂದೇ ಮಾತರಂ ಹಾಗೂ ನಾಡಗೀತೆ ಹಾಡಿದರು.