ಕೂಡಿಗೆ ಸಾಮಾನ್ಯ ಕ್ಷೇತ್ರ: ವಿ.ಪಿ. ಶಶಿಧರ್ ಅವರಿಗೆ ಹಾದಿ ಸುಗಮ
admincoorgdaily

ಕುಶಾಲನಗರ:ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ನ.24 ರಂದು ಪ್ರಕಟವಾದ ತಿದ್ದುಪಡಿ ಅಧಿಸೂಚನೆಯಲ್ಲಿ ಕೂಡಿಗೆ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವಾಗಿ ಪ್ರಕಟಿಸಲಾಗಿದೆ. ಇದರಿಂದ ಕುಶಾಲನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೂಡಿಗೆ ಕ್ಷೇತ್ರದ ಆಕಾಂಕ್ಷಿ ವಿ.ಪಿ. ಶಶಿಧರ್ ಅವರಿಗೆ ಹಾದಿ ಸುಗಮವಾಗಿದೆ.
ಕುಶಾಲನಗರ ತಾಲೂಕಿನಲ್ಲಿ ಒಟ್ಟು 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಹೆಬ್ಬಾಲೆ ಹಿಂದುಳಿದ ವರ್ಗ ಅ, ಕೂಡಿಗೆ ಸಾಮಾನ್ಯ, ಗುಡ್ಡೆಹೊಸೂರು ಹಿಂದುಳಿದ ವರ್ಗ ಅ (ಮಹಿಳೆ), ವಾಲ್ನೂರು ತ್ಯಾಗತ್ತೂರು ಹಿಂದುಳಿದ ವರ್ಗ ಅ, ಸುಂಟಿಕೊಪ್ಪ ಪರಿಶಿಷ್ಟ ಜಾತಿ (ಮಹಿಳೆ) ಎಂದು ಅಂತಿಮ ಮೀಸಲಾತಿ ಪ್ರಕಟವಾಗಿದೆ.
ಈ ಹಿಂದೆ ಕರಡು ಪಟ್ಟಿಯಲ್ಲಿ ಕೂಡಿಗೆ ಕ್ಷೇತ್ರ ಸಾಮಾನ್ಯ (ಮಹಿಳೆ) ಎಂದು ಪ್ರಕಟವಾಗಿತ್ತು. ಇದರಿಂದ ವಿ.ಪಿ. ಶಶಿಧರ್ ಅವರಿಗೆ ಹಾಗೂ ಬೆಂಬಲಿಗರಿಗೆ ನಿರಾಸೆಯಾಗಿತ್ತು. ಈ ವಿಚಾರವನ್ನು ಶಾಸಕ ಡಾ. ಮಂತರ್ ಗೌಡ ಅವರ ಗಮನಕ್ಕೆ ತರಲಾಗಿತ್ತು. ಶಾಸಕರು ಕೂಡಿಗೆ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವಾಗಿ ಉಳಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸತತ ಪ್ರಯತ್ನ ನಡೆಸಿ, ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಅಂತಿಮವಾಗಿ ಕೂಡಿಗೆ ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಿರ್ಧಾರವನ್ನು ವಿ.ಪಿ. ಶಶಿಧರ್ ಅವರ ಬೆಂಬಲಿಗರು ಸಂಭ್ರಮದಿಂದ ಸ್ವಾಗತಿಸಿದ್ದು, ಮಾತು ನೀಡಿದಂತೆ ನಡೆದುಕೊಂಡ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ. ಶಶಿಧರ್ ಅವರು, ಕೂಡಿಗೆ ಕ್ಷೇತ್ರ ಸಾಮಾನ್ಯವಾಗಿರುವುದು ಸಂತಸ ತಂದಿದೆ. ಹಿತೈಷಿಗಳು, ಬಂಧುಗಳು, ಪಕ್ಷದ ಮುಖಂಡರು ದೊಡ್ಡ ಸಂಖ್ಯೆಯಲ್ಲಿ ತಮ್ಮ ಜೊತೆಗಿದ್ದಾರೆ. ಅವರೆಲ್ಲರ ನೆರವಿನಿಂದ ಗೆಲುವಿನ ನಿರೀಕ್ಷೆಯಲ್ಲಿದ್ದೇವೆ ಎಂದರು.
ಎಲ್ಲರ ಕನಸಿನ ಕುಶಾಲನಗರ ತಾಲೂಕು ರಚನೆಯಾದ ಮೇಲೆ ಪ್ರಪ್ರಥಮ ಬಾರಿಗೆ ಅನೇಕ ಬದಲಾವಣೆಗಳೊಂದಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕುಶಾಲನಗರ ತಾಲೂಕು ಪಂಚಾಯಿತಿಗೆ ಪ್ರತ್ಯೇಕ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ ಎಂದರು.
ಇತ್ತೀಚೆಗೆ 24 ಜಿಲ್ಲಾ ಪಂಚಾಯಿತಿಗಳನ್ನು ರಚನೆ ಮಾಡಿ ವರದಿ ಕೊಟ್ಟ ನಂತರ, ಕೂಡಿಗೆಯನ್ನು ಹೆಬ್ಬಾಲೆ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿದ್ದರು. ಕೂಡಿಗೆ ಒಂದು ಪ್ರತಿಷ್ಠಿತ ಕ್ಷೇತ್ರ. ಕೊಡಗು ಜಿಲ್ಲೆಯಲ್ಲಿ ಈಗ 29 ಕ್ಷೇತ್ರಗಳಾಗಿಸುವ ನಿಟ್ಟಿನಲ್ಲಿ ಪ್ರಯತ್ನವಿತ್ತು. ಕೂಡಿಗೆಯನ್ನು ಪ್ರತ್ಯೇಕ ಕ್ಷೇತ್ರ ಮಾಡುವುದರಲ್ಲಿ ತಮ್ಮ ಶ್ರಮವಿದೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಆಸೆ, ನಿರೀಕ್ಷೆ, ಭಾವನಾತ್ಮಕ ಸಂಬಂಧವಿತ್ತು. ಇಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕರ್ಮಭೂಮಿಯಾಗಿ ಕೆಲಸ ಮಾಡಲು ಪ್ರಾರಂಭ ಮಾಡಿದ್ದೇನೆ ಎಂದರು.
ಕೂಡಿಗೆಗೆ ತಾವು ಆಯ್ಕೆಯಾಗುವುದಕ್ಕೂ ಮುಂಚೆ, 2007 ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ, ರೇವಣ್ಣ ಅವರು ಇದ್ದಾಗ, ತಾವು ಜನತಾದಳದಲ್ಲಿದ್ದಾಗ ಮೊರಾರ್ಜಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಕೂಡಿಗೆಗೆ ತರುವುದರಲ್ಲಿ ತಮ್ಮ ಪಾತ್ರವಿದೆ ಎಂದು ಸ್ಮರಿಸಿದರು.
ಈ ಕ್ಷೇತ್ರದಲ್ಲಿ ಎಲ್ಲ ವರ್ಗದವರನ್ನೂ ಪ್ರತಿನಿಧಿಯಾಗಿ, ಜನರ ಭಾವನೆಗಳಿಗೆ ಗೌರವ ಕೊಟ್ಟು, ಸಾರ್ಥಕ ಭಾವನೆಯಿಂದ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರ ಸಾಮಾನ್ಯವಾದ್ದರಿಂದ ಎಲ್ಲವೂ ಕಾಣುತ್ತಿದೆ. ರಣರಂಗದಲ್ಲೂ ಕೆಲವು ಸವಾಲುಗಳಿರುತ್ತವೆ. ಅವೆಲ್ಲವನ್ನು ಸರಿದೂಗಿಸಿಕೊಂಡು, ಪಕ್ಷದ ಹೊಣೆಗಾರಿಕೆಯನ್ನು ನಿರ್ವಹಿಸುತ್ತೇನೆ. ನಾಲ್ಕು ದಶಕಗಳ ಕಾಲ ಹೋರಾಟ ಮಾಡಿದ ತಮಗೆ ಚಿಕ್ಕ ಪ್ರತಿಫಲವಾಗಿ ಈ ಬಾರಿ ಕಾಂಗ್ರೆಸ್ಗೆ ಜಿಲ್ಲಾ ಪಂಚಾಯಿತಿಗೆ ಅವಕಾಶ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪ್ರಜಾಸೌಧ ಇರಬಹುದು, ಆಸ್ಪತ್ರೆ ಇರಬಹುದು, ಎಲ್ಲವೂ ತಾಲೂಕು ಮಟ್ಟದಲ್ಲಿ ಆಗಿದೆ. ನಾವೆಲ್ಲರೂ ಗೆದ್ದರೆ, ಪ್ರತ್ಯೇಕ ತಾಲೂಕು ಪಂಚಾಯಿತಿ ಕಟ್ಟಡವನ್ನು ಕಟ್ಟಬೇಕಾಗುತ್ತದೆ. ಎಲ್ಲವೂ ಸಾಧ್ಯವಾಗುವುದು ಕಾಂಗ್ರೆಸ್ನಿಂದ ಮಾತ್ರ. ಈ ಗೆಲುವು ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ಹೇಳಿದರು.
ಕೂಡಿಗೆ ವ್ಯಾಪ್ತಿಯಲ್ಲಿ ವಿಶಿಷ್ಟವಾದ ಸಾಮಾಜಿಕ, ಆರ್ಥಿಕ, ಕೈಗಾರಿಕಾ ಅಭಿವೃದ್ಧಿಯನ್ನು ಕಟ್ಟಬೇಕು ಎಂಬ ಆಸೆ ಇದೆ. ತಮ್ಮನ್ನು ಚುನಾಯಿತಗೊಳಿಸಿದರೆ ಇಲ್ಲಿ ಬೇರೆ ರೀತಿಯ ರೂಪ, ಸ್ವರೂಪ, ಸ್ಪರ್ಶವನ್ನು ಕೊಡುವುದಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿ.ಪಿ. ಶಶಿಧರ್ ಅವರ ಹಿತೈಷಿಗಳು, ಬೆಂಬಲಿಗರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.