Kodagu

ಕಣಿವೆ ಬಸವನಹಳ್ಳಿಯಲ್ಲಿ 45 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ

admincoorgdaily

ಕಣಿವೆ ಬಸವನಹಳ್ಳಿಯಲ್ಲಿ 45 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಯಡಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದು ಗ್ರಾಮೀಣ ಭಾಗದ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳನ್ನು ನೀಡುವುದರ ಜೊತೆಗೆ ಅನೇಕ ವರ್ಷಗಳಿಂದ ಆಗದೇ ಇದ್ದ ಅಭಿವೃದ್ಧಿ ಕೆಲಸಗಳು ಈಗ ಆಗುತ್ತಿವೆ. ಇದಕ್ಕೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳೇ ಪ್ರತ್ಯಕ್ಷ ಸಾಕ್ಷಿ. ಕೆಲವರು ಅಭಿವೃದ್ಧಿಯನ್ನು ಸಹಿಸದೆ ಆರೋಪ ಮಾಡುತ್ತಿದ್ದಾರೆ, ಆದರೆ ಅಭಿವೃದ್ಧಿ ಕೆಲಸಗಳು ಜನರಿಗೆ ಗೊತ್ತಿವೆ. ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ನನ್ನ ಕ್ಷೇತ್ರದ ಪ್ರತಿ ಹಳ್ಳಿಯ ಸಮಸ್ಯೆಯನ್ನು ಹತ್ತಿರದಿಂದ ನೋಡಿದ್ದೇನೆ, ಅವುಗಳಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು. ಈಗಾಗಲೇ ಈ ಭಾಗದ ಅನೇಕ ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಆಲೂರು ಸಿದ್ದಾಪುರ ಗ್ರಾ.ಪಂ. ಕಾರ್ಯದರ್ಶಿ ಧರ್ಮಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಶೋಕ್, ಚೇತನ್, ಜೀವನ್, ಹೆಚ್.ಟಿ. ಕೊಮರಪ್ಪ, ಕೆ.ಎನ್. ದಿನೇಶ್ ಹಾಗೂ ಕಣಿವೆ ಬಸವನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.