Kodagu

ಮುಂದಿನ ಕಸಾಪ ಅಧ್ಯಕ್ಷರನ್ನಾಗಿ ಟಿ.ಪಿ.ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಶ್ವಾಸ

admincoorgdaily

ಮುಂದಿನ ಕಸಾಪ ಅಧ್ಯಕ್ಷರನ್ನಾಗಿ ಟಿ.ಪಿ.ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಶ್ವಾಸ
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ತಮ್ಮ ಐದು ವರ್ಷಗಳ ಅಧಿಕಾರವಧಿ ನ.23 ರಂದು ಪೂರ್ಣಗೊಳ್ಳುತ್ತಿದೆ. ಟಿ.ಪಿ.ರಮೇಶ್ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ವಿಶ್ವಾಸ ತಮಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಮುಂದಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಸುಮಾರು 25 ವರ್ಷಗಳ ಕಾಲ ಸಾಹಿತ್ಯದ ಬೆಳವಣಿಗೆಗಾಗಿ ಅವಿರತ ಶ್ರಮ ವಹಿಸಿದ ಟಿ.ಪಿ.ರಮೇಶ್ ಅವರು ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎನ್ನುವುದು ಎಲ್ಲರ ಅಭಿಲಾಷೆಯಾಗಿದೆ. ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯಲಿದೆ ಎಂದರು.

ಗೌರವ ಕಾರ್ಯದರ್ಶಿ ರೇವತಿ ರಮೇಶ್ ಅವರು ಮಾತನಾಡಿ ನಗರದ ಸುದರ್ಶನ ಅತಿಥಿ ಗೃಹದ ರಸ್ತೆ ಸಮೀಪ ಕಸಾಪಕ್ಕೆ ಸೇರಿದ 60 ಸೆಂಟ್ ಜಾಗವಿದ್ದು, ಇಲ್ಲಿ ಕಸಾಪ ಭವನ ನಿರ್ಮಾಣವಾಗಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ. ಈ ಭವನ ನಿರ್ಮಾಣ ಕಾರ್ಯದ ನೇತೃತ್ವದ ವಹಿಸಲು ಟಿ.ಪಿ.ರಮೇಶ್ ಅವರು ಅರ್ಹ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಅವರು ಮಾತನಾಡಿ ಕೇಶವ ಕಾಮತ್ ಹಾಗೂ ಟಿ.ಪಿ.ರಮೇಶ್ ಅವರುಗಳು ಸಾಹಿತ್ಯಪರವಾದ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ ಅಧ್ಯಕ್ಷ ಸ್ಥಾನ ಟಿ.ಪಿ.ರಮೇಶ್ ಅವರಿಗೆ ಲಭಿಸಿದರೆ ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಟಿ.ಪಿ.ರಮೇಶ್ ಅವರು ಮಾತನಾಡಿ 60 ಸೆಂಟ್ ಜಾಗದಲ್ಲಿ ಕಸಾಪ ಭವನ ನಿರ್ಮಿಸುವುದು ನನ್ನ ಗುರಿಯಾಗಿದೆ. ಎಲ್ಲರ ಸಹಕಾರ ಪಡೆದು ಕಳೆದ 8 ವರ್ಷಗಳಿಂದ ಭವನ ನಿರ್ಮಾಣ ಕಾರ್ಯಕ್ಕಾಗಿ ಪ್ರಯತ್ನಗಳು ನಡೆದಿದೆ. ಮಡಿಕೇರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಿದ ಸಂದರ್ಭ ಉಳಿಕೆಯಾಗಿದ್ದ 10 ಲಕ್ಷ ರೂ.ಗಳನ್ನು ನಿರಖು ಠೇವಣಿಯಾಗಿ ಇಡಲಾಗಿದ್ದು, ಈ ಮೊತ್ತ ಈಗ 16 ಲಕ್ಷ ರೂ. ಆಗಿರಬಹುದು. ಇದನ್ನು ಭವನ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದರು.