ಕುಶಾಲನಗರ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಮೀಸಲಾತಿ ಸಮಸ್ಯೆ ಬಗೆಹರಿಯುವ ವಿಶ್ವಾಸ: ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್
admincoorgdaily

ಕುಶಾಲನಗರ: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕುಶಾಲನಗರ ತಾಲೂಕಿನ ಐದು ಕ್ಷೇತ್ರಗಳ ಪೈಕಿ ಕನಿಷ್ಠ ಒಂದು ಕ್ಷೇತ್ರವಾದರೂ ಸಾಮಾನ್ಯ ಕ್ಷೇತ್ರವಾಗಿರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಗೆ ವಿರುದ್ಧವಾಗಿ ಮೀಸಲಾತಿ ನಿಗದಿಯಾಗಿರುವುದು ನೂತನ ಕುಶಾಲನಗರ ತಾಲೂಕಿಗೆ ಅನ್ಯಾಯವಾದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ವೈಯಕ್ತಿಕವಾಗಿಯೂ ಹಾಗೂ ಕೆಪಿಸಿಸಿ ಸದಸ್ಯನಾಗಿಯೂ ತಮ್ಮ ವಿರೋಧವನ್ನು ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದರು.
ನಮ್ಮಲ್ಲಿ ಇಬ್ಬರು ಶಾಸಕರಿದ್ದು, ಅವರಲ್ಲಿ ಒಬ್ಬರು ಕಾನೂನು ತಜ್ಞರಾಗಿದ್ದಾರೆ. ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಬೆಂಗಳೂರಿನಲ್ಲಿ ಪಕ್ಷದ ಮುಖಂಡರೊಂದಿಗೆ ಈ ವಿಚಾರವಾಗಿ ಚರ್ಚಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸವಿದೆ ಎಂದು ಮಂಜುನಾಥ್ ಗುಂಡುರಾವ್ ಹೇಳಿದರು.
ತಾಲೂಕು ಹೋರಾಟಗಾರ ವಿ.ಪಿ. ಶಶಿಧರ್ ಅವರು ಅಪ್ರಬುದ್ಧ ರಾಜಕಾರಣಿಯಲ್ಲ, ಪ್ರಬುದ್ಧ ರಾಜಕಾರಣಿ ಎಂದ ಅವರು,
ವಿ.ಪಿ. ಶಶಿಧರ್ ಅವರು ಕಳೆದ ಮೂರು ವರ್ಷಗಳಿಂದ ಕೂಡಿಗೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಅದೇ ಕ್ಷೇತ್ರದಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದರು.
ರಾಜಕೀಯ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಅವರು, ಮೀಸಲಾತಿ ಪಟ್ಟಿಯ ಪ್ರಕಟಗೊಂಡ ಹಿನ್ನೆಲೆಯಲ್ಲಿ ಭಾವನಾತ್ಮಕವಾಗಿ ತಕ್ಷಣವೇ ರಾಜಕೀಯ ನಿವೃತ್ತಿ ಘೋಷಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಶಾಸಕ ಮಂತರ್ ಗೌಡ ಅವರ ಪ್ರಯತ್ನದ ಮೇಲೆ ವಿಶ್ವಾಸ;
ಕುಶಾಲನಗರ ತಾಲೂಕಿನ ಜನರ ನಿರೀಕ್ಷೆಗಳಿಗೆ ಸ್ಪಂದಿಸಿ, ಮೀಸಲಾತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಸಕ ಡಾ. ಮಂತರ್ ಗೌಡ ಅವರು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪಕ್ಷದ ಮುಖಂಡರೊಂದಿಗೆ ಹಾಗು ಹಿರಿಯರು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅವರು ಕೈಗೊಳ್ಳುತ್ತಿರುವ ಪ್ರಯತ್ನಗಳು ಫಲ ನೀಡುವ ವಿಶ್ವಾಸವಿದೆ. ನೂತನ ತಾಲೂಕಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದ್ದಾರೆ ಎಂಬ ನಿರೀಕ್ಷೆಯಿದೆ.
ಈ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಸೂಕ್ತ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ ಎಂಬ ಆಶಾಭಾವನೆ ಇದೆ. ಮೀಸಲಾತಿ ವಿಚಾರದಲ್ಲಿ ಕುಶಾಲನಗರ ತಾಲೂಕಿಗೆ ನ್ಯಾಯ ದೊರಕುವ ನಿರೀಕ್ಷೆಯಿದ್ದು, ಮುಂದಿನ ಬೆಳವಣಿಗೆಗಳು ಸಕಾರಾತ್ಮಕವಾಗಿರಲಿವೆ ಎಂಬ ವಿಶ್ವಾಸವಿದೆ ಎಂದು ಮಂಜುನಾಥ್ ಗುಂಡುರಾವ್ ತಿಳಿಸಿದರು.