ಗೊಂದಲಕ್ಕೆ ತೆರೆ:ಮಡಿಕೇರಿ ದಸರಾ ಡೇಟ್ ಫಿಕ್ಸ್
admincoorgdaily

ಮಡಿಕೇರಿ: ನಾಡಹಬ್ಬ ಮೈಸೂರು ದಸರಾ ಸೇರಿದಂತೆ ರಾಜ್ಯದ ವಿವಿಧೆಡೆ ದಸರಾ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಮಡಿಕೇರಿ ದಸರಾ ದಿನಾಂಕದ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೂ ತೆರೆ ಬಿದ್ದಿದೆ. ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ, ದಸರಾ ಶೋಭಾಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಮಂಜಿನ ನಗರಿ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸಂಭ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿ ದಸರಾ ದಿನಾಂಕದ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ಇದೀಗ ಕಡೆಗೂ ತೆರೆ ಬಿದ್ದಿದೆ. ಮೈಸೂರು ದಸರಾವನ್ನು ಕೇಂದ್ರವಾಗಿಟ್ಟುಕೊಂಡು ಕೊಡಗು ಸೇರಿದಂತೆ ಹಲವು ಭಾಗಗಳಲ್ಲಿ ದಸರಾ ಆಚರಣೆ ನಡೆಯುತ್ತಾ ಬಂದಿದೆ. ಮೈಸೂರು ದಸರಾ ಅಕ್ಟೋಬರ್ 21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲೂ ಅಕ್ಟೋಬರ್ 21ರಂದೇ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಮಡಿಕೇರಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ದಸರ ಸಮಿತಿಯ ಸಭೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಸೇವೆಗೆ ಸಂಬಂಧಿಸಿದವರು, ಅರ್ಚಕರು ಹಾಗೂ ಹಿರಿಯರು ಭಾಗವಹಿಸಿ ದಸರಾ ಹಾಗೂ ಕರಗದ ದಿನಾಂಕದ ಕುರಿತು ಚರ್ಚೆ ನಡೆಸಿದ್ದಾರೆ.
ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ ಮತ್ತು ದಸರಾ ಶೋಭಾಯಾತ್ರೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕರಗವು ತನ್ನ ಸಾಂಪ್ರದಾಯಿಕ ಆಚರಣೆಯಂತೆ ನಗರ ಪ್ರದಕ್ಷಿಣೆ ನಡೆಸಿ, ದಸರಾ ದಿನದಂದು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಅಕ್ಟೋಬರ್ 22ರಂದು ಬನ್ನಿ ಕಡಿಯುವ ನಿರ್ಧಾರಕ್ಕೆ ಬರಲಾಗಿದೆ.
ಇನ್ನು ಮಡಿಕೇರಿ ದಸರಾ ದಿನಾಂಕ ನಿಗದಿ ವಿಚಾರದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಸಂಪ್ರದಾಯ ಹಾಗೂ ಆಚರಣೆಗಳನ್ನು ಪರಿಗಣಿಸಲಾಗಿದೆ. ಅಧಿಕ ಮಾಸ ಸೇರಿದಂತೆ ಪಂಚಾಂಗದ ಬದಲಾವಣೆಗಳಿಂದ ಕೆಲ ಸಂದರ್ಭಗಳಲ್ಲಿ ದಸರಾ ದಿನಾಂಕದಲ್ಲಿ ವ್ಯತ್ಯಾಸ ಕಂಡುಬಂದರೂ, ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹಿರಿಯರು ತಿಳಿಸಿದ್ದಾರೆ. ಕರಗ ಆಚರಣೆಯೂ ದಸರಾ ಸಂಪ್ರದಾಯದ ಪ್ರಮುಖ ಭಾಗವಾಗಿದ್ದು, ಕರಗ ಹೊರಡುವ ಸಮಯ, ನಗರ ಪ್ರದಕ್ಷಿಣೆ ಹಾಗೂ ದಸರಾ ಶೋಭಾಯಾತ್ರೆಯ ದಿನಾಂಕಗಳನ್ನು ಪರಸ್ಪರ ಹೊಂದಾಣಿಕೆಯಿಂದ ನಿಗದಿಪಡಿಸಲಾಗುತ್ತದೆ.