ಶಾಸಕ ಡಾ.ಮಂತರ್ ಗೌಡರಿಗೆ ಅಭಿನಂದನಾ ಸಮಾರಂಭ : ಗೌಡ ಸಮಾಜಕ್ಕೆ ಅಗತ್ಯ ಸಹಕಾರ : ಶಾಸಕರ ಭರವಸೆ
admincoorgdaily

ಮಡಿಕೇರಿ ಸೆ.6 : ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ಗೌಡ ಸಮಾಜದ ಚಟುವಟಿಕೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಒಗ್ಗಟ್ಟನಿಂದ ಮಾತ್ರ ಒಂದು ಸಮಾಜದ ಏಳಿಗೆ ಸಾಧ್ಯ, ಈ ಅಭಿನಂದನಾ ಸಮಾರಂಭ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಗೌಡ ಸಮಾಜದ ಪ್ರಗತಿಗೆ ಶಾಸಕ ಡಾ.ಮಂತರ್ ಗೌಡ ಅವರು ನೀಡಿದ ಸಹಕಾರವನ್ನು ಸ್ಮರಿಸಿದರು.
ಒಕ್ಕೂಟದ ಒಂದು ವರ್ಷದ ಸಾಧನೆಯ ಸಂಚಿಕೆ “ಆರೋಹಣ”ವನ್ನು ಬಿಡುಗಡೆಗೊಳಿಸಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಾ.ತೇನನ ರಾಜೇಶ್, ಕಾರ್ಯದರ್ಶಿ ಪೇರಿಯನ ಕೆ.ಉದಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಬೆಂಗಳೂರು ಮೈಸೂರು ಭಾಗದ ಸದಸ್ಯ ಗೌಡ ಸಮಾಜಗಳು, ಸಂಘಟನೆಗಳು, ಗೌಡ ಯುವ ವೇದಿಕೆ, ಯುವ ಸಂಘಗಳು, ಮಹಿಳಾ ಸಂಘಗಳು, ಗೌಡ ವಿದ್ಯಾ ಸಂಘ, ಗೌಡ ಸಮಾಜಗಳ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.