Kodagu

ಕೊಡಗಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಂಜಂಕ್ಟಿವೈಟಿಸ್ (ಕೆಂಗಣ್ಣು) - ಮುನ್ನೆಚ್ಚರಿಕೆ ಅಗತ್ಯ

admincoorgdaily

ಕೊಡಗಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಂಜಂಕ್ಟಿವೈಟಿಸ್ (ಕೆಂಗಣ್ಣು) - ಮುನ್ನೆಚ್ಚರಿಕೆ ಅಗತ್ಯ
ಮಡಿಕೇರಿ; ಕೊಡಗಿನಾದ್ಯಂತ ಕಳೆದ ಕೆಲವು ದಿನಗಳಿಂದ ಕಂಜಂಕ್ಟಿವೈಟಿಸ್ (ಕೆಂಗಣ್ಣು) ಅಥವಾ ಪಿಂಕ್-ಐ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ವೈರಸ್‌ನಿಂದ ಉಂಟಾಗುವ ಕಂಜಂಕ್ಟಿವೈಟಿಸ್ ಬಹಳ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ಕುಟುಂಬ, ಶಾಲೆ, ಕಚೇರಿ ಹಾಗೂ ಜನಸಂದಣಿ ಇರುವ ಸ್ಥಳಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಸಾಮಾನ್ಯ ಲಕ್ಷಣಗಳು:
ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಉರಿ, ತುರಿಕೆ ಅಥವಾ ಕಿರಿಕಿರಿ, ಕಣ್ಣು ರೆಪ್ಪೆಗಳಲ್ಲಿ ಊತ, ಕಣ್ಣಿನಿಂದ ನೀರು ಅಥವಾ ಸ್ರಾವ ಬರುವುದು, ಒಂದು ಕಣ್ಣಿನಿಂದ ಆರಂಭವಾಗಿ ಮತ್ತೊಂದು ಕಣ್ಣಿಗೂ ಹರಡುವುದು ಸಾಮಾನ್ಯವಾಗಿದೆ.

ಸೋಂಕು ಹರಡುವುದನ್ನು ತಡೆಯಲು:
- ಆಗಾಗ್ಗೆ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆಯಬೇಕು.
- ಕಣ್ಣುಗಳನ್ನು ಉಜ್ಜುವುದು ಅಥವಾ ಮುಟ್ಟುವುದನ್ನು ತಪ್ಪಿಸಬೇಕು.
- ಟವೆಲ್, ದಿಂಬು, ಕಾಸ್ಮೆಟಿಕ್ ಹಾಗೂ ಕಣ್ಣಿನ ಔಷಧಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.
- ಸೋಂಕಿರುವವರ ನಿಕಟ ಸಂಪರ್ಕವನ್ನು ಕಡಿಮೆ ಮಾಡಿ.
- ಕಾಂಟ್ಯಾಕ್ಟ್ ಲೆನ್ಸ್ ಬಳಸುವುದನ್ನು ಚೇತರಿಸಿಕೊಳ್ಳುವವರೆಗೆ ನಿಲ್ಲಿಸಬೇಕು.
- ಪದೇಪದೇ ಮುಟ್ಟುವ ವಸ್ತುಗಳು ಸ್ವಚ್ಛವಾಗಿರಲಿ.

ಹೆಚ್ಚಿನ ವೈರಲ್ ಕಂಜಂಕ್ಟಿವೈಟಿಸ್ ಪ್ರಕರಣಗಳು 1 ರಿಂದ 2 ವಾರಗಳಲ್ಲಿ ಸ್ವಯಂ ಗುಣವಾಗುತ್ತವೆ. ತಂಪಾದ ಒದ್ದೆ ಬಟ್ಟೆಯನ್ನು ಕಣ್ಣಿನ ಮೇಲೆ ಇಟ್ಟು ಮಲಗಿ ಒತ್ತುವುದು ಹಾಗೂ ವೈದ್ಯರ ಸಲಹೆಯಂತೆ EYE DROPS ಬಳಸುವುದು ಕಿರಿಕಿರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯಾಟಿಕ್ ಅಥವಾ ಸ್ಟೆರಾಯ್ಡ್ ಕಣ್ಣಿನ ಹನಿಗಳನ್ನು ಬಳಸಬೇಡಿ. ತೀವ್ರ ಕಣ್ಣಿನ ನೋವು, ದೃಷ್ಟಿ ಮಸುಕಾಗುವುದು ಅಥವಾ ಕಡಿಮೆಯಾಗುವುದು, ವೀಕ್ಷಣೆಗೆ ತೊಂದರೆ, ಅತಿ ಕೆಂಪಾಗಿ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ಸುಧಾರಣೆ ಕಾಣದಿದ್ದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಿ.

ಡಾ. ಚಿಣ್ಣಪ್ಪ ಎ.ಜೆ.
ನೇತ್ರ ತಜ್ಞರು, ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಡಿಕೇರಿ.