Kodagu

ಕೊಡವರ ವಿರುದ್ಧ ಷಡ್ಯಂತರ,ಹಾಲಿ, ಮಾಜಿ ಶಾಸಕರು ಸ್ಪಷ್ಠೀಕರಣ ನೀಡಬೇಕು: ಮಂಜು ಚಿಣ್ಣಪ್ಪ, ಕೊಡವರ ಮೇಲಿನ ಬಹುಸಂಖ್ಯಾತರ ಶೋಷಣೆ ಸಹಿಸಲಾಗದು

admincoorgdaily

ಮಂಜು‌ ಚಿಣ್ಣಪ್ಪ
⁠ಮಡಿಕೇರಿ;
ಕೊಡವ ಸಮುದಾಯವನ್ನು ವಿರೋಧಿಸಲೆಂದೇ  ಉದ್ದೇಶಿತ, ಪೂರ್ವ ನಿಯೋಜಿತ ಸಭೆಗೆ ಹಾಲಿ ಮಡಿಕೇರಿ ಶಾಸಕರಾದ ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಮಾಜಿ ಶಾಸಕ ಕೆ. ಜಿ ಬೋಪಯ್ಯ ಹಾಜರಾಗಿ, ಉದ್ಧೇಶ ಪೂರಿತವಾಗಿ ಕೊಡವ ಜನಾಂಗ ವಿರೋಧಿ ನಿರ್ಣಯ ಕೈಗೊಳ್ಳಲು ಕಾರಣಕರ್ತರಾಗಿರುವುದು ವಿಷಾದನೀಯ. ಗೌಡ ಸಮಾಜ ಆಯೋಜಿಸಿದ್ದ ಸಭೆಯು ಒಂದು ಕೊಡವ ಜನಾಂಗ ವಿರೋಧಿ ಷಡ್ಯಂತರವಾಗಿದ್ದು ಈ ಷಡ್ಯಂತರದಲ್ಲಿ ಭಾಗವಹಿಸಿರುವ ಕುರಿತು ಇವರು ಜನತೆಗೆ ಸ್ಪಷ್ಟನೆ ನೀಡಬೇಕೆಂದು ಯುನೈಟೆಡ್ ಕೊಡವ ಆರ್ಗನೈಸೇಷನ್- ಯುಕೊ ಸಂಘಟನೆ ಅಧ್ಯಕ್ಷರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.

ಕೊಡವ ಜನಾಂಗವು ಪ್ರಪಂಚದಾದ್ಯಂತ ಸೂಕ್ಮ ಅಲ್ಪಸಂಖ್ಯಾತರಾಗಿದ್ದು, ಕೊಡವ ಭಾಷೆಯು ಯುನೆಸ್ಕೋದ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ. ಆದರೆ ಗೌಡ ಜನಾಂಗವು ಜನಸಂಖ್ಯೆಯಲ್ಲಿ ಕರ್ನಾಟಕದ  ಶೇ. 25 ರಷ್ಟಿದ್ದು, ರಾಜ್ಯ ವಿಧಾನಸಭೆಯಲ್ಲಿ, ಗರಿಷ್ಠ ಶಾಸಕರು ಹಾಗು ಸಚಿವರನ್ನು ಹೊಂದಿರುವ ಈ ದೇಶದಲ್ಲಿ  ಜನಸಂಖ್ಯೆ ಹಾಗು ರಾಜಕೀಯವಾಗಿ ಬಲಿಷ್ಠ ಜನಾಂಗವಾಗಿದೆ. ಇಂತಹ ಬಲಾಡ್ಯ ಜನಾಂಗವು ಅತ್ಯಂತ ಸೂಕ್ಷ್ಮ ಅಲ್ಪಸಂಖ್ಯಾತ ಜನಾಂಗವು ತಮ್ಮ  ಹಕ್ಕುಗಳನ್ನು ಪಡೆಯಲು ಅಡ್ಡಗಾಲು ಹಾಕುತ್ತಿರುವುದು ಜನಾಂಗೀಯ ಶೋಷಣೆಯಾಗಿದೆ, ಅದರಲ್ಲೂ ಜವಾಬ್ದಾರಿ ಸ್ಥಾನದಲ್ಲಿರುವ ಚುನಾಯಿತ ಜನಪ್ರತಿನಿಧಿಗಳು ಈ ಷಡ್ಯಂತರದ ಭಾಗವಾಗಿರುವುದು ಸಂವಿಧಾನ ವಿರೋಧಿ ಕೃತ್ಯವಾಗಲಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು. 

ಭಾರತದ ಸಂವಿಧಾನವು ಯಾವುದೇ ಒಂದು ಬಹುಸಂಖ್ಯಾತ ಜನಾಂಗದ ಪಿತ್ರಾರ್ಜಿತ ಆಸ್ತಿಯಲ್ಲ. ಕೊಡವರಿಗೆ ತಮ್ಮ ಹಕ್ಕು ಭಾದ್ಯತೆಗಳನ್ನು ಸಂವಿಧಾನಾತ್ಮಕವಾಗಿ ಕಾಪಾಡಿಕೊಳುವ ಎಲ್ಲಾ ಸ್ವಾತಂತ್ರ್ಯವಿದೆ, ಇದನ್ನು ವಿರೋಧಿಸುವುದು ಜನಾಂಗೀಯ ಶೋಷಣೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಗೌಡ ಸಮಾಜಗಳ ಒಕ್ಕೂಟವು ಪ್ರತಿ ಬಾರಿಯೂ ತಾವಾಗಿಯೇ ಕೊಡವ ಜನಾಂಗದ ವಿರುದ್ಧ ಷಡ್ಯಂತರಗಳನ್ನು ರೂಪಿಸುವುದರ ಮೂಲಕ ಸಾಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಮಾಡುತ್ತಿದ್ದು, ಪರೋಕ್ಷವಾಗಿ ಕೊಡವರಿಗೆ ಬೆದರಿಕೆಯನ್ನು ಹಾಕುವ ಕೆಲಸವನ್ನು ಮಾಡುತ್ತಿದೆ.  ಈ ವಿಷಯವನ್ನು  ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಕೊಡವ ಜನಾಂಗಕ್ಕೆ ಸೂಕ್ತ ರಕ್ಷಣೆ ನೀಡಬೇಕಿದೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕೊಡವರ ಮೇಲಿನ ದೌರ್ಜನ್ಯಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳೇ ನೇರ ಹೊಣೆ ಹೊತ್ತುಕೊಳ್ಳಬೇಕಿದೆ ಎಂದು ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ. 

ಕೊಡವರ ಮೇಲೆ ಒಂದು ನಿರ್ದಿಷ್ಟ ಬಹುಸಂಖ್ಯಾತ ಜನಾಂಗವು ನಿರಂತರ ಶೋಷಣೆ ನಡೆಸುತ್ತಿರುವುದರ ಕುರಿತು ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದು ಮಾಹಿತಿ ನೀಡುವುದಾಗಿ  ತಿಳಿಸಿದ ಮಂಜು ಚಿಣ್ಣಪ್ಪ, ಸರ್ಕಾರಗಳು ಕೂಡಲೇ ಮಧ್ಯ ಪ್ರವೇಶಿಸಿ ಕೊಡವರಿಗೆ ಸೂಕ್ತ ರಕ್ಷಣೆಯನ್ನು ಖಾತರಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಬೃಹತ್ ಮಟ್ಟದಲ್ಲಿ  ಜನಾಂದೋಲನ ರೂಪಿಸಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.