ಕಟ್ಟಡ ಕಾರ್ಮಿಕರ ಆಕ್ರೋಶ ಸ್ಫೋಟ - ವಿರಾಜಪೇಟೆಯಲ್ಲಿ ಸಿಐಟಿಯು ಮನವಿ, 800 ಕೋಟಿ ಹಗರಣದ ತನಿಖೆಗೆ ಆಗ್ರಹ!
ಕಟ್ಟಡ ಕಾರ್ಮಿಕರ ಆಕ್ರೋಶ ಸ್ಫೋಟ - ವಿರಾಜಪೇಟೆಯಲ್ಲಿ ಸಿಐಟಿಯು ಮನವಿ, 800 ಕೋಟಿ ಹಗರಣದ ತನಿಖೆಗೆ ಆಗ್ರಹ!
admincoorgdaily

ವಿರಾಜಪೇಟೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಲವು ವರ್ಷಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ವಿರಾಜಪೇಟೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ಭಾಗವಾಗಿ ಈ ಮನವಿ ಸಲ್ಲಿಸಲಾಗಿದ್ದು, ಕಲ್ಯಾಣ ಮಂಡಳಿಯ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕಲ್ಯಾಣ ಮಂಡಳಿಯ ಅಧ್ಯಕ್ಷರೂ ಆದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಗಮನಕ್ಕೆ ಹಲವು ವರ್ಷಗಳಿಂದ ಸಮಸ್ಯೆಗಳನ್ನು ತಂದಿದ್ದರೂ ಇತ್ಯರ್ಥವಾಗಿಲ್ಲ ಎಂದು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿತು.
ಈ ಸಂದರ್ಭ ಮಾತನಾಡಿದ ಸಿಐಟಿಯು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಎ.ಸಿ. ಸಾಬು ಅವರು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಲೇಬರ್ ಕೋಡ್‌ನ ಸಾಮಾಜಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 2(7)ರ ಪ್ರಕಾರ 50 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದ ಕಾಮಗಾರಿಯಲ್ಲಿ ದುಡಿಯುವವರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸದಿರುವುದು ಕಾರ್ಮಿಕ ವಿರೋಧಿಯಾಗಿದೆ ಎಂದು ಕಿಡಿಕಾರಿದರು. ಇದರಿಂದ ಸೆಸ್ ಸಂಗ್ರಹಕ್ಕೆ ಕೊಕ್ಕೆ ಹಾಕಿ ಮಂಡಳಿಗಳ ಸ್ವಾಯತ್ತತೆ ಕಸಿಯಲಾಗುತ್ತಿದ್ದು, ನಿಧಿಯನ್ನು ಷೇರು ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಹೂಡಿಕೆ ಮಾಡಲು ಅವಕಾಶ ನೀಡಿರುವ ಈ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸದೆ, ಕಾರ್ಮಿಕ ಸ್ನೇಹಿ ಪರ್ಯಾಯ ಕಾನೂನುಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಶೈಕ್ಷಣಿಕ ಸಹಾಯಧನ 717 ಕೋಟಿ ರೂಪಾಯಿಯಿಂದ 148 ಕೋಟಿ ರೂಪಾಯಿಗೆ ಭಾರಿ ಕಡಿತವಾಗಿದ್ದು, 8,33,859 ಅರ್ಜಿಗಳು ತಿರಸ್ಕೃತಗೊಂಡಿವೆ.
ಮತ್ತು ಆಧಾರ್/ಓPಅI ಮ್ಯಾಪಿಂಗ್ ಹೆಸರಿನಲ್ಲಿ 1,88,217 ಅರ್ಜಿಗಳಿಗೆ ಹಣ ಪಾವತಿಯಾಗಿಲ್ಲ ಎಂದು ದೂರಿದರು. ಮಳೆಗಾಲ ಅಥವಾ ಕೆಲಸವಿಲ್ಲದ ವೇಳೆ ಕೃಷಿ ಚಟುವಟಿಕೆಯಲ್ಲಿ ತೊಡಗುವ ಕಾರ್ಮಿಕರ ಅರ್ಜಿಗಳನ್ನು 'ಕುಟುಂಬ ಆಪ್' ಆಧಾರದ ಮೇಲೆ ತಿರಸ್ಕರಿಸುವುದನ್ನು ನಿಲ್ಲಿಸಿ, ಎಲ್‌ಕೆಜಿಯಿಂದ ಎಂಜಿನಿಯರಿಂಗ್‌ವರೆಗೆ ಸಹಾಯಧನ ಹೆಚ್ಚಿಸಬೇಕು ಹಾಗೂ ಮೆಡಿಕಲ್, ಐಐಟಿ, ಎನ್‌ಐಟಿ ಸೇರಿದಂತೆ ಮಾನ್ಯತೆ ಪಡೆದ ಕೋರ್ಸ್ಗಳಿಗೆ ಸರ್ಕಾರಿ ಶುಲ್ಕ ಭರಿಸಬೇಕು ಎಂದು ಕೋರಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎಸ್. ರಮೇಶ್ ಶಾಜಿ ಮಾತನಾಡಿ, ಅರ್ಜಿ ಪಡೆಯದೆಯೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಖರೀದಿಸಲಾಗುತ್ತಿರುವ ಕಳಪೆ ಗುಣಮಟ್ಟದ ಕಿಟ್ ಖರೀದಿಯಲ್ಲಿ ಭಾರಿ ಅವ್ಯವಹಾರದ ಶಂಕೆ ಇದೆ ಎಂದು ಆರೋಪಿಸಿದರು. ಕಿಟ್ ಖರೀದಿ ನಿಲ್ಲಿಸಿ ತನಿಖೆ ನಡೆಸಬೇಕು ಹಾಗೂ ಕಾರ್ಮಿಕರ ವೈದ್ಯಕೀಯ ತಪಾಸಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ 800 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಮಾಸಿಕ ಪಿಂಚಣಿಯನ್ನು 5,000 ರೂಪಾಯಿಗೆ ಮತ್ತು ಕುಟುಂಬ ಪಿಂಚಣಿಯನ್ನು 3,000 ರೂಪಾಯಿಗೆ ಹೆಚ್ಚಿಸಬೇಕು, ಕಂದಾಯ ಇಲಾಖೆಯ ನಿರಪೇಕ್ಷಣಾ ಪತ್ರ ರದ್ದುಪಡಿಸಿ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಿಂಚಣಿ ಪಾವತಿಸಬೇಕು ಹಾಗೂ ಜನ್ಮ ದಿನಾಂಕ ಹೊಂದಾಣಿಕೆ ಇಲ್ಲದ ಅರ್ಜಿಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಲವಾರು ಬೇಡಿಕೆಗಳ ಕುರಿತು ಕೂಲಂಕಷವಾಗಿ ಚರ್ಚಿಸಲು ಕೂಡಲೇ ಸಂಘದ ಮುಖಂಡರೊಂದಿಗೆ ಸಭೆ ನಿಗದಿಪಡಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು. ವಿರಾಜಪೇಟೆ ಕಾರ್ಮಿಕ ಇಲಾಖೆಯ ನವೀನ್ ಅವರು ಮನವಿ ಪತ್ರ ಸ್ವೀಕರಿಸಿ ಸರಕಾರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಖಜಾಂಚಿ ಖಾಸಿಂ ಕೆ.ಎ., ರಾಜ್ಯ ಸಮಿತಿ ಸದಸ್ಯರಾದ ಕೆ.ಕೆ. ಹರಿದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಎ. ಹಮೀದ್, ಕೆ.ಎನ್ ರತೀಸ್. ಚೆಲುವ, ಕುಮಾರ್, ಗಣೇಶ್, ಸೇರಿದಂತೆ ಸಾದಿಕ್ ಇತರರು ಉಪಸ್ಥಿತರಿದ್ದರು.