ನಿರಂತರ ಮಳೆ: ನವಗ್ರಾಮದಲ್ಲಿ ಬರೆ ಕುಸಿತ
admincoorgdaily

ಕುಶಾಲನಗರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ನವಗ್ರಾಮದಲ್ಲಿ ಮನೆಯ ಬರೆ ಕುಸಿದ ಘಟನೆ ನಡೆದಿದ್ದು, ಸ್ಥಳಕ್ಕೆ ಗ್ರಾ.ಪಂ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನವಗ್ರಾನದ ಪ್ರೇಮ ಎಂಬವರ ಮನೆಯ ಬರೆ ಕುಸಿದು ಬಿದ್ದಿದೆ. ಇದರ ಪರಿಣಾಮ ನಂದೀಶ್ ಎಂಬವರ ಮನೆಯ ಗೋಡೆಯ ಮೇಲೆ ಬರೆ ಕುಸಿದು ಬಿದ್ದಿದೆ. ಗೋಡೆ ಬಿರುಕು ಬಿದ್ದಿದ್ದು, ಮತ್ತೇ ಮಳೆಗೆ ಮನೆಯ ಗೋಡೆ ಮೇಲೆ ಬರೆ ಕುಸಿಯುವ ಸಾಧ್ಯತೆಯಿದೆ. ಪ್ರೇಮ ಹಾಗೂ ಯೋಗೇಶ್ ಅವರು ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ವಿನಾಯಕ ಬಡಾವಣೆಯ ಆಬಿದ ಹಾಗೂ ಹರ್ಷಿತ್ ಎಂಬವರ ಮನೆ ಗೋಡೆ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಲಿಲ್ಲ.
ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದಲ್ಲಿ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿನ ಬಹುತೇಕ ಮನೆಗಳಿಗೆ ಸೂಕ್ತ ತಡೆಗೋಡೆಯಿಲ್ಲದೇ ಜನರು ಆತಂಕದಲ್ಲಿ ವಾಸಿಸುವಂತಾಗಿದೆ. ಮಳೆಗಾಲದಲ್ಲಿ ಯಾವಾಗಲೂ ಬರೆ ಕುಸಿಯುವ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ನವಗ್ರಾಮ ಮಾತ್ರವಲ್ಲದೇ ಬಸವೇಶ್ವರ ಬಡಾವಣೆ, ವಿನಾಯಕ ಬಡಾವಣೆ ಹಾಗೂ ಸುಂದರನಗರದಲ್ಲಿಯೂ ತಡೆಗೋಡೆಯಿಲ್ಲದೇ ಬಹಳಷ್ಟು ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಅನಾಹುತಕ್ಕೂ ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ.
ಆದ್ದರಿಂದ ಮಾನ್ಯ ಶಾಸಕರು ಈ ಬಗ್ಗೆ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಮಂಜು ಹಾಗೂ ಇನ್ನಿತರರು ಇದ್ದರು.