Kodagu

ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ

admincoorgdaily

ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ
ವಿರಾಜಪೇಟೆ: ಕೂರ್ಗ್ ಮಾಸ್ಟರ್ಸ್ ಕಪ್ ವತಿಯಿಂದ ಮೂರನೇ ವರ್ಷದ 50+ ಕಾಲ್ಚೆಂಡು ಪಂದ್ಯಾಟವು ನವೆಂಬರ್ 21 ಮತ್ತು 22ರಂದು ವಿರಾಜಪೇಟೆಯ ತಾಲೂಕು ಆಟದ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕೂರ್ಗ್ ಮಾಸ್ಟರ್ಸ್ ಕಪ್ ಅಧ್ಯಕ್ಷ ಎಲ್.ಜಿ. ಭಾಸ್ಕರ್ ತಿಳಿಸಿದ್ದಾರೆ.

ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ಬಾರಿ ಮೂರನೇ ವರ್ಷದ ಪಂದ್ಯಾಟವನ್ನು ಇನ್ನಷ್ಟು ವಿಶೇಷವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೂರ್ಗ್ ಮಾಸ್ಟರ್ಸ್ ಕಪ್ ಉಪಾಧ್ಯಕ್ಷ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ವಿರಾಜಪೇಟೆ ಸುತ್ತಮುತ್ತಲಿನ 6 ಕಿ.ಮೀ. ವ್ಯಾಪ್ತಿಯೊಳಗಿನ ಕ್ರೀಡಾಪಟುಗಳಿಗೆ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದೆ. ಒಂದು ತಂಡದಲ್ಲಿ ಐದು ಮಂದಿ ಆಟಗಾರರು ಹಾಗೂ ಇಬ್ಬರು ಹೆಚ್ಚುವರಿ ಆಟಗಾರರು ಸೇರಿದಂತೆ ಒಟ್ಟು ಏಳು ಮಂದಿ ಇರಲಿದ್ದಾರೆ. ಈಗಾಗಲೇ ಎಂಟು ತಂಡಗಳು ನೋಂದಾಯಿಸಿಕೊಂಡಿದ್ದು, ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಹಾಗೂ ತಂಡಗಳು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪಂದ್ಯಾಟದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ಕೂರ್ಗ್ ಮಾಸ್ಟರ್ಸ್ ಕಪ್ ಖಜಾಂಚಿ ಅಲ್ತಾಫ್ ಮಾತನಾಡಿ, ಪಂದ್ಯಾಟ ನಡೆಯುವ ಎರಡೂ ದಿನ ಕ್ರೀಡಾಭಿಮಾನಿಗಳು ಹಾಗೂ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 50 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು, ಅಕ್ಟೋಬರ್ 15ರೊಳಗೆ ₹1,000 ನೋಂದಣಿ ಶುಲ್ಕ ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ಹಲವು ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇನ್ನೂ ನೋಂದಾಯಿಸಿಕೊಳ್ಳದವರು ಕೂಡಲೇ ಆಯೋಜಕರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಆನಂದ (SBI), ಉಪ ಕಾರ್ಯದರ್ಶಿ ಪ್ರಕಾಶ್, ಸಹಖಜಾಂಚಿ ಮರವಿನ್ ಲೋಬೊ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಪೇಂದ್ರ, ಪವಿತ್ರನ್, ಆಂಟೋನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನೋಂದಣಿಗಾಗಿ ಸಂಪರ್ಕಿಸಿ:

ಅಲ್ತಾಫ್: 99729 59156
ಎಲ್.ಜಿ. ಭಾಸ್ಕರ್: 98805 02631
ಆನಂದ (SBI): 94483 26037