ಆನೆಚೌಕೂರು ಗೇಟ್ ಬಳಿ ಕೊಡಗಿನ ದಂಪತಿ ಮೇಲೆ ಹಲ್ಲೆ
admincoorgdaily

ಗೋಣಿಕೊಪ್ಪ; ಕೊಡಗಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ದಂಪತಿ ಮೇಲೆ ಆನೆಚೌಕೂರು ಗೇಟ್ ಬಳಿ ಅಪರಿಚಿತ ಕಿಡಿಗೇಡಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮೊನ್ನೆ ರಾತ್ರಿ ನಡೆದಿದೆ.
ಘಟನೆ ವಿವರ:
ಕೊಡಗಿನ ದಂಪತಿ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಆನೆಚೌಕೂರು ಗೇಟಿನಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆ ಮಧ್ಯದಲ್ಲಿ KA 09 KK 3305 ನೋಂದಣಿಯ ಮಾರುತಿ ಸುಜುಕಿ ಬಲೆನೊ ಕಾರು ನಿಲ್ಲಿಸಿತ್ತು. ಕಾರಿನಲ್ಲಿದ್ದವರು ಕಾಡಿನೊಳಗಿದ್ದ ಆನೆಯ ಫೋಟೋ ತೆಗೆಯುತ್ತಿದ್ದರು.
ಇದನ್ನು ಕಂಡ ದಂಪತಿ ಕಾರು ನಿಲ್ಲಿಸಿ, "ಈ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯುವುದು ಅಪಾಯ, ವನ್ಯಪ್ರಾಣಿ ದಾಳಿ ಮಾಡಬಹುದು" ಎಂದು ಎಚ್ಚರಿಕೆ ನೀಡಿ ಮುಂದೆ ಸಾಗಿದ್ದಾರೆ.
ಇದರಿಂದ ಕುಪಿತಗೊಂಡ ಆ ಕಾರಿನಲ್ಲಿದ್ದವರು ದಂಪತಿಯ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ, ದಂಪತಿ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ಕಾಡಿಗೆ ಎಸೆದು ಪರಾರಿಯಾಗಿದ್ದಾರೆ.
ಆ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ 112 ಗೆ ಕರೆ ಮಾಡಲು ಸಾಧ್ಯವಾಗದೆ ದಂಪತಿ ನೇರವಾಗಿ ಬೆಂಗಳೂರು ತಲುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ:
ಈ ಮಾರ್ಗದಲ್ಲಿ ರಾತ್ರಿ ವೇಳೆ ಕೇರಳ, ಮೈಸೂರು, ಬೆಂಗಳೂರು ಭಾಗದ ವಾಹನಗಳು ರಸ್ತೆ ಬದಿ ನಿಲ್ಲಿಸಿ ಮದ್ಯಪಾನ ಮಾಡುವುದು, ಫೋಟೋ ತೆಗೆಯುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ಕಚೇರಿ ಇದ್ದರೂ ಸಿಬ್ಬಂದಿ ಗಸ್ತು ತಿರುಗುತ್ತಿಲ್ಲ, ಎರಡು ಜೀಪು, ಬೈಕ್ ಇದ್ದರೂ ಸಮರ್ಪಕ ಗಸ್ತು ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕರ್ತವ್ಯ ಲೋಪದಿಂದಲೇ ರಕ್ಷಿತ ಅರಣ್ಯದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.