ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ವಿರಾಜಪೇಟೆಯಲ್ಲಿ ಸಿಪಿಐ(ಎಂ) ಪ್ರತಿಭಟನೆ
admincoorgdaily

ವಿರಾಜಪೇಟೆ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಚುನಾವಣಾ ಆಯೋಗದ ಜನವಿರೋಧಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಖಂಡಿಸಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ - ವಿರಾಜಪೇಟೆ ನಗರ ಘಟಕದ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸ್ಥಳದಲ್ಲಿ ಸೇರಿದ ಸಿಪಿಐ(ಎಂ) ಕಾರ್ಯಕರ್ತರು ಹಾಗೂ ವಿವಿಧ ಜನಪರ ಸಂಘಟನೆಗಳ ನಾಯಕರು ಕೆಂಪು ಬಾವುಟಗಳನ್ನು ಹಿಡಿದು, ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೇಶವ್ಯಾಪಿ ಎಸ್ಐಆರ್ (SIR) ಪ್ರಕ್ರಿಯೆಯಿಂದಾಗಿ ಅನೇಕ ಗಂಭೀರ ಸಮಸ್ಯೆಗಳು ಎದುರಾಗಿದ್ದು, ನೈಜ ಮತದಾರರು ಮತ್ತು ಸಕ್ರಿಯ ಸಂಘಟನೆಗಳ ನಾಯಕರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಎ.ಸಿ. ಸಾಬು ಮಾತನಾಡಿ"ಚುನಾವಣಾ ಆಯೋಗವು ತನ್ನ ನಿಷ್ಪಕ್ಷಪಾತ ಧೋರಣೆಯನ್ನು ತೊರೆದು ಆಡಳಿತಾರೂಢರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ತೀವ್ರ ಧಕ್ಕೆ ತರುತ್ತಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಬೆಲೆ ಏರಿಕೆ, ಕಾರ್ಮಿಕರ ಮತ್ತು ಶ್ರಮಿಕರ ಶೋಷಣೆ ಹಾಗೂ ಸಾಮಾನ್ಯ ಜನರ ಮೇಲಾಗುತ್ತಿರುವ ಗಂಭೀರ ಸಮಸ್ಯೆಗಳನ್ನು ಮರೆಮಾಚಲು ಇಂತಹ ಜನವಿರೋಧಿ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಕೊಡಗಿನಲ್ಲಿಯೂ ನಿವಾಸಿಗಳು, ತೋಟದ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡದೆ, ಮತದಾನದ ಹಕ್ಕನ್ನೇ ಕಸಿಯುವ ಹುನ್ನಾರ ನಡೆಯುತ್ತಿದೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಖಂಡಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಡಾ. ದುರ್ಗಾ ಪ್ರಸಾದ್ ಮಾತನಾಡಿ, "ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿದ ಅತ್ಯಂತ ಪವಿತ್ರ ಹಕ್ಕು ಮತದಾನ. ಆದರೆ ಎಸ್ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ನೈಜ ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗುತ್ತಿದೆ. ಇದರಿಂದಾಗಿ ಸಾಮಾನ್ಯ ನಾಗರಿಕರು, ಯುವಕರು ಮತ್ತು ಶೋಷಿತ ವರ್ಗದವರು ಚುನಾವಣಾ ಪ್ರಕ್ರಿಯೆಯಿಂದ ವಂಚಿತರಾಗುವ ಭೀತಿ ಎದುರಾಗಿದೆ. ದೇಶ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತುರ್ತು ಪರಿಸ್ಥಿತಿಯಂತಹ ಸವಾಲುಗಳನ್ನು ಎದುರಿಸುತ್ತಿರುವಾಗ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ಕೇಂದ್ರದ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ. ಈ ಗೊಂದಲಗಳಿಗೆ ಮತ್ತು ಅನಹುತಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇ ನೇರ ಹೊಣೆ ಹೊರಬೇಕು ಹಾಗೂ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು" ಎಂದು ತೀವ್ರವಾಗಿ ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಮುಖಂಡ ಹಾಗೂ ವಕೀಲರಾದ ಕೆ.ವಿ. ಸುನಿಲ್ ಮಾತನಾಡಿ, "ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ಈ ಹೋರಾಟ ಅನಿವಾರ್ಯವಾಗಿದೆ. ಎಸ್ಐಆರ್ ಪ್ರಕ್ರಿಯೆಯ ಕಾನೂನಾತ್ಮಕ ತೊಡಕುಗಳು ಮತ್ತು ನಿಯಮಬಾಹಿರ ಕಾರ್ಯವೈಖರಿಯಿಂದಾಗಿ ದೇಶಾದ್ಯಂತ ಸಾಮಾನ್ಯ ಜನರಿಗೆ ಭಾರೀ ಅನ್ಯಾಯವಾಗುತ್ತಿದೆ. ಕೊಡಗಿನಂತಹ ಬೆಟ್ಟಗುಡ್ಡಗಳ ಜಿಲ್ಲೆಯಲ್ಲಿ ಮೂಲಸೌಕರ್ಯ, ಹಕ್ಕುಪತ್ರ ಹಾಗೂ ಜೀವನೋಪಾಯದ ಸಮಸ್ಯೆಗಳಿಂದ ನರಳುತ್ತಿರುವ ಬಡ ಜನರಿಗೆ ಈಗ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವುದೇ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ. ಪ್ರಜಾಪ್ರಭುತ್ವಕ್ಕೆ ಕಂಟಕ ತರುವ ಇಂತಹ ಹುನ್ನಾರಗಳನ್ನು ಕಾನೂನಾತ್ಮಕವಾಗಿ ಮತ್ತು ಜನಾಂದೋಲನದ ಮೂಲಕ ಎದುರಿಸುತ್ತೇವೆ ಎಂದರು.
ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಎ. ಮಹದೇವ್ ಮಾತನಾಡಿ, ಎಸ್ಐಆರ್ ಪಟ್ಟಿಯಿಂದ ಸ್ವತಃ ತಮ್ಮ ಹೆಸರನ್ನೇ ಅನ್ಯಾಯವಾಗಿ ಕೈಬಿಡಲಾಗಿತ್ತು. ತೀವ್ರ ಹೋರಾಟ ಮತ್ತು ಆಕ್ಷೇಪಣೆಯ ನಂತರ ಇದೀಗ ಮತ್ತೆ ಹೆಸರನ್ನು ಸೇರಿಸಲಾಗಿದೆ. ಕೆಲ ಸಂಘಟನೆಗಳ ಹಾಗೂ ಜಾಗೃತ ಮುಖಂಡರುಗಳ ಹೆಸರುಗಳನ್ನು ಉದ್ದೇಶಪೂರ್ವಕವಾಗಿಯೇ ಪಟ್ಟಿಯಿಂದ ಹೊರಗಿಡಲಾಗುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಸರಕಾರದ ಹಾಗೂ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸದಸ್ಯ ಸತೀಶ್ ಕುಮಾರ್ ಮಾತನಾಡಿ, ಶೋಷಿತ ಮತ್ತು ಸಾಮಾನ್ಯ ಜನರ ಮತದಾನದ ಹಕ್ಕನ್ನು ಕಸಿಯುವ ಯಾವುದೇ ಯತ್ನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಜನಪರ ಸಂಘಟನೆಗಳ ನಾಯಕರು ಹಾಗೂ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ರೈತ ಸಂಘಟನೆ ರೈತ ಮುಖಂಡ ಹಮೀದ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎ.ಎಚ್. ಸಾದಿಕ್, ದಲಿತ ಸಂಘಟನೆ ಮುಖಂಡ ಕುಮಾರ್, ಸಿಪಿಐ(ಎಂ) ಶಾಖಾ ಸದಸ್ಯರಾದ ಪಿ. ಖಾಲಿದ್, ಕೆ.ಕೆ. ಹರಿದಾಸ್, ಕೆ.ಎ. ಖಾಸಿಮ್, ಬಾಪುಟ್ಟಿ ಕಾರ್ಯದರ್ಶಿಗಳಾದ ಕೆ.ಎಸ್. ಶಾಜಿ ರಮೇಶ್ ಹಾಗೂ ಇನ್ನಿತರ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.